ಶುಕ್ರವಾರ, ಅಕ್ಟೋಬರ್ 14, 2016

ತಹ ತಹ....2 ಪೊಲೀಸರನ್ನು ಹೊಡೆಯಿರಿ... ಸೈನಿಕರನ್ನು ಹೊಗಳಿರಿ :

ತಹ ತಹ....2


'
ರಾಜ್ಯದಲ್ಲಿರೋದು ತಲೆಕೆಟ್ಟ ಸರಕಾರ.ಆಮ್ನೆಸ್ಟಿ ಸಂಸ್ಥೆ ರಕ್ಷಿಸುವ ಯತ್ನ ಮಾಡುವ ಮೂಲಕ ದೇಶದ್ರೋಹಿ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿದೆ. ಸೇನೆ ವಿರುದ್ಧ ಘೋಷಣೆ ಕೂಗಿದವರ ಬಂಧನಕ್ಕೆ ಒತ್ತಡಗಳು ಹೆಚ್ಚುತ್ತಿದ್ದರೂ ಸರಕಾರ ಕ್ರಮ ಕೈಗೊಳ್ಳುತ್ತಿಲ್ಲವಾದ್ದರಿಂದ ಹೋರಾಟದ ಕಿಚ್ಚು ನಾಡಿನ ಉದ್ದಗಲಕ್ಕೂ ವ್ಯಾಪಿಸುತ್ತಿದೆ..." ಎಂದು ಶ್ರೀಮಾನ್ಯ ಯಡಿಯೂರಪ್ಪನವರು  ನಿನ್ನೆ ಟೌನ್ ಹಾಲ್ ಮುಂದೆ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಗುಡುಗಿದರು.

ಎಂತಾ ಮುತ್ತಿನಂತಾ ದೇಶಭಕ್ತಿಯ ಮಾತುಗಳವು. ಸೇನೆ ಬೇಕಾದಷ್ಟು ದೌರ್ಜನ್ಯ ಮಾಡಿದರೇನಾಯಿತು ಅದು ದೇಶ ಸೇವೆಯ ಭಾಗವೇ. ವಿಚಾರಣೆ ಹೆಸರಲ್ಲಿ  ಅಮಾಯಕರ ಕೊಲೆ ಸುಲಿಗೆ ಲೂಟಿ ಅತ್ಯಾಚಾರ ಮಾಡಿದರೇನಾಯಿತು ಅದನ್ನು ವಿರೋಧಿಸುವುದೂ ದೇಶದ್ರೋಹವೇ. ದೇಶದ್ರೋಹಿಗಳಿಗೆ ಏನಾಗಿದೆ... ಸುಖಾ ಸುಮ್ಮನೇ ಮಿಲಿಟರಿ ವಿರುದ್ಧ ಘೋಷಣೆ ಕೂಗ್ತಾರೆ. ದೇಶಕ್ಕಾಗಿ ಸೇನೆ ಮಾಡುವ ಅನ್ಯಾಯ ಅತ್ಯಾಚಾರಗಳನ್ನ ಸಹಿಸಿಕೊಳ್ಳೋದು ದೇಶಭಕ್ತಿಯ ಸಂಕೇತ ಎಂದು ದೇಶವಿರೋಧಿಗಳಿಗೆ ಯಾರು ತಿಳಿಹೇಳಬೇಕು. ಏನೋ ದೇಶದ ಪುಣ್ಯ.... ನಮ್ಮ ಪರಮ ಪವಿತ್ರ ದೇಶ ದೇಶಭಕ್ತರ ಆಡಳಿತದಲ್ಲಿ ಸುಖವಾಗಿದೆ ದಲಿತರು ಹಾಗೂ ಅಲ್ಪಸಂಖ್ಯಾತರು, ಪ್ರಗತಿಪರರು ಸುಮ್ಮನೇ ಶೋಷಣೆ ಎಂದು ಬಾಯಿ ಬಡಿದುಕೊಳ್ತಾರೆ. ದೇಶಕ್ಕಾಗಿ ಮಾನ ಪ್ರಾಣ ಸುಖ ಶಾಂತಿ ಸ್ವಾತಂತ್ರ್ಯಗಳ ತ್ಯಾಗಕ್ಕೆ ಸದಾ ಸಿದ್ದರಾಗಿರಬೇಕು ಎಂದು ಇವರಿಗೆ ಹೇಗೆ ತಿಳಿಹೇಳಬೇಕು. 

ಸೇನೆ ಅಂದ್ರೇನು... ದೇಶರಕ್ಷಕರ ವಿರುದ್ಧ ಘೋಷಣೆ ಕೂಗೋದು ಅಂದ್ರೇನು..?  ಇಂತಹ ದೇಶದ್ರೋಹವನ್ನು ಸಹಿಸಲು ಸಾಧ್ಯವೇ ಇಲ್ಲಾ ..  ಮನುಷ್ಯರಿಗಿಂತಾ ದೇಶ ಮುಖ್ಯ.. ದೇಶಕ್ಕಿಂತಾ ದೇಶಭಕ್ತಿ ಮುಖ್ಯಪ್ರಶ್ನಾತೀತರಾದ ವೀರ ಸೈನಿಕರಿಗೆ ಯಾರಾದರೂ ಏನಾದರೂ ಅಂದರೆ ದೇಶರಕ್ಷಣೆಯ ಗುತ್ತಿಗೆದಾರರು ಹೇಗೆ ಸುಮ್ಮನೆ ಕೈಕಟ್ಟಿಕೊಂಡು ಕುಳಿತುಕೊಳ್ಳಲು ಸಾಧ್ಯ. ದೇಶಭಕ್ತರೆಂಬ ಕಟ್ಟಾಳುಗಳ ಕಾಲಾಳು ಯಡಿಯೂರಪ್ಪ ಹೇಳಿದ್ದರಲ್ಲೂ ಪಾಯಿಂಟ್ ಐತೆ..  ಅವರ ಪ್ರತಿ ಮಾತಿನ ಹಿಂದೆ ಓಟ ಬ್ಯಾಂಕ್ ಲೆಕ್ಕಾಚಾರ ಐತೆ.... ಇಲ್ಲದಿದ್ದರೆ ಪರಮ ಪವಿತ್ರ ಚಾರಿತ್ರ್ಯದ ಮಹಾ ನಾಯಕ ಯಡಿಯೂರು ಬೀದಿಗೆ ಬಂದು ಹೀಗೆ ಕಂಠಶೋಷಣೆ ಮಾಡಿಕೊಳ್ಳುತ್ತಿದ್ದರಾ? ನಿಜವಾದ ದೇಶಭಕ್ತಿ ಅಂದರೆ ಇದು...
 

ಇನ್ನೊಬ್ಬ ಮಹಾ ದೇಶಭಕ್ತರಾದ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳು ಹಾಕಿದ ಅವಾಜಿಗೆ ಪೋಲೀಸ್ ಇಲಾಖೆಯೆ ನಡುಗಬೇಕಿತ್ತು. " ಆಮ್ನೆಸ್ಟಿ ಕಚೇರಿ ಎದುರು ಪ್ರತಿಭಟನೆ ನಿರತ ಕಾರ್ಯಕರ್ತರ ಮೇಲೆ ಲಾಟಿ ಬೀಸಿದ ಡಿಸಿಪಿ ಸತೀಶ ಕುಮಾರ್ ನಿನಗೆ ಮಾನ ಮರ್ಯಾದೆ ಇದ್ದರೆ ಯುನಿಫಾರಂ ಕಳಚಿಟ್ಟು ಹೊರಗೆ ಬಾ. ನಮ್ಮ ಯುವ ಮೋರ್ಚಾ ಕಾರ್ಯಕರ್ತರ ಕೈಗೆ ಸಿಗು. ಆಗ ತೋರಿಸು ನಿನ್ನ ಪೌರುಷ" ಎಂದು  ಸಾರ್ವಜನಿಕವಾಗಿಯೇ ಧಮಕಿ ಹಾಕಿದ್ದಾರೆ. ಇದಪ್ಪಾ ನಿಜವಾಗಲೂ ಪೌರುಷ ಅಂದ್ರೆ. ಪೊಲೀಸರು ದೇಶಭಕ್ತ ವಟುಗಳ ಮೇಲೆ ಕೈಮಾಡಿದ್ದಂತೂ ಅಕ್ಷಮ್ಯ ಅಪರಾಧ. ಅದಕ್ಕಾಗಿ ಭಕ್ತರಿಗೆ ಅಧಿಕಾರಿ ವರದಿರಹಿತವಾಗಿ ಸಿಕ್ಕರೆ ಹಿಡಿದು ಹಲ್ಲೆ ಮಾಡಲು ಕರೆ ಕೊಟ್ಟ ನಾಯಕನನ್ನು ಹೊಗಳಲೇಬೇಕು. ಸೈನಿಕರೋ ದೇಶ ಕಾಯೋರು...ಅಮಾಯಕ ಜನರ ಮೇಲೆ ಹಲ್ಲೆ ಮಾಡಿ ಸಾಯಿಸಿದ್ರೆ ಅದು ದೇಶಭಕ್ತಿ. ಆದರೆ ಪೊಲೀಸರು ಗಲಭೆ ಮಾಡೋರ ಮೇಲೂ ಕೈಮಾಡಬಾರದು. ಮಾಡಿದ್ರೆ ಅದು ಮಾನವ ಹಕ್ಕಿನ ಉಲ್ಲಂಘನೆ. ನಮ್ಮ ಸಂಘಿಗಳ ನಿಯಮಗಳನ್ನು ಅರಿಯದ ಪೊಲೀಸರೂ ಜನದ್ರೋಹಿಗಳೇ ಸೈಪೊಲೀಸ್ ಅಧಿಕಾರಿ ತನ್ನ ಡ್ಯೂಟಿ ತಾನು ಮಾಡಿದ್ದರೂ ದೇಶಭಕ್ತರ ಮೇಲೆ ಕೈಮಾಡಕೂಡದಿತ್ತು. ನಮ್ಮ ದೇಶಭಕ್ತರ ಪ್ಯಾಸಿಸ್ಟ್ ಸರಕಾರ ದೇಶಾದ್ಯಂತ ಎಲ್ಲಾ ರಾಜ್ಯದಲ್ಲೂ  ಬಂದಾಗ ಪೊಲೀಸರನ್ನೆಲ್ಲಾ ಹೊಡೆದೋಡಿಸಿ ಎಲ್ಲಾ ಕಡೆ ಮಿಲಿಟರಿ ಸೈನಿಕರನ್ನೇ ನಿಯಮಿಸುವದನ್ನು ಯಾರೂ ತಡೆಯಲು ಸಾಧ್ಯವೇ ಇಲ್ಲ. ಯಾಕೆಂದರೆ ದೇಶಭಕ್ತರು ಏನೇ ಮಾಡಿದರೂ ಅದು ಕೇವಲ ಮನುಷ್ಯರಿಗಾಗಿ ಅಲ್ಲಾ ದೇಶಕ್ಕಾಗಿ ಅನ್ನುವ ವಿವೇಚನೆ ದೇಶದ್ರೋಹಿಗಳಿಗೆ ಇರಬೇಕು
 
ಬೊಲೋ ಭಾರತ್ ಜನತಾ ಪಕ್ಷಕೀ  ಜೈ...   ಒಂದೇ ಸಂಘ ಪರಿವಾರಂ..

.

                                                                  - ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ