ಶನಿವಾರ, ಅಕ್ಟೋಬರ್ 15, 2016

ತಹ ತಹ .....45 ಇಸ್ಲಾಂ ವೈವಾಹಿಕ ಕಾನೂನು ಮತ್ತು ಸಮಾನ ನಾಗರಿಕ ಸಂಹಿತೆ:



ಪವಿತ್ರ ಕುರಾನಿನಲ್ಲಿ ಒಂದು ವಚನದಲ್ಲಿ ದೇವನು ಹೀಗೆ ಹೇಳುತ್ತಾನೆ *'ಒಂದು ಜನಾಂಗವು ತನ್ನ ಸ್ಥಿತಿಯನ್ನು ಬದಲಾಯಿಸಲು ಉದ್ದೇಶಿಸದ ಹೊರತು ಅಲ್ಲಾಹನು ಕೂಡ ಜನಾಂಗದ ಸ್ಥಿತಿಯನ್ನು ಬದಲಾಯಿಸಲಾರ ಎಂದು*. ಮಾತು ಬಹುಷಃ ಚಲನಶೀಲತೆಯನ್ನು ಕಳೆದುಕೊಂಡ ಎಲ್ಲಾ ಧರ್ಮಗಳಿಗೂ ಅನ್ವಯಿಸುತ್ತದೆ. ಇಂತಹ ಧರ್ಮಗಳು ಮಹಿಳೆಯರ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಹತ್ತಿಕ್ಕಿ ಪಿತೃಪ್ರಧಾನ ಪಕ್ಷಪಾತಿಯಾಗಿಯೇ ಕಾರ್ಯನಿರ್ವಹಿಸುತ್ತವೆ. ಇದಕ್ಕೆ ಹಿಂದೂ ಧರ್ಮದ ಹಾಗೆಯೇ ಇಸ್ಲಾಂ ಧರ್ಮವೂ ಕೂಡಾ ಹೊರತಲ್ಲ.

ತ್ರಿವಳಿ ತಲ್ಲಾಕ್, ನಿಕಾಹ್ ಹಲಾಲ್ ಮತ್ತು ಬಹುಪತ್ನಿತ್ವ ಎನ್ನುವ ಮೂರು ಧಾರ್ಮಿಕ ನಿಬಂಧನೆಗಳು ಇಸ್ಲಾಂ ಧರ್ಮದಲ್ಲಿ ಮಹಿಳೆಯರಿಗೆ ಮಾರಕವಾಗಿವೆ. ಕಟ್ಟುನಿಟ್ಟಾಗಿ ಆಚರಿಸಿದರೆ ಧಾರ್ಮಿಕ ಕಟ್ಟಳೆಗಳು ಜನರ ಒಳಿತಿಗಾಗಿಯೇ ರಚನೆಗೊಂಡಿವೆ. ಯಾವುದೇ ಧಾರ್ಮಿಕ ನಿಯಮಗಳು ಆಯಾ ಕಾಲದ ಸಂದರ್ಭಗಳಿಗೆ ಅನುಗುಣವಾಗಿ ರಚನೆಯಾಗಿರುತ್ತವೆಯೇ ಹೊರತು ಯಾವವೂ ಸಾರ್ವಕಾಲಿಕವಲ್ಲ. ಉದಾಹರಣೆಗೆ ಪ್ರವಾದಿಗಳ ಕಾಲಘಟ್ಟದಲ್ಲಿ ಯುದ್ಧಗಳು ನಿರಂತರವಾಗಿ ನಡೆದು ಮಹಿಳೆಯರು ವಿಧವೆಯರಾಗಿ ನಿಕೃಷ್ಟವಾಗಿ ಬದುಕುತ್ತಿದ್ದರು. ಆಗ ಅನಾಥ ಹಾಗೂ ವಿಧವೆಯರಿಗೆ ಬದುಕನ್ನು ದೊರಕಿಸಿಕೊಡಲೆಂದೇ ಬಹುಪತ್ನಿತ್ವ ಪದ್ದತಿ ಆಚರಣೆಗೆ ಬಂದಿತು. ಆದರೆ ಈಗ ಯುದ್ದಗಳೂ ಅಪರೂಪ. ಉತ್ತಮ ವೈದ್ಯಕೀಯ ತಂತ್ರಜ್ಞಾನದಿಂದಾಗಿ ಗಂಡಸರ ಆಯಸ್ಸೂ ಹೆಚ್ಚಾಗಿದೆ. ಇಂತಹ ಬದಲಾದ ಪರಿಸ್ಥಿತಿಯಲ್ಲಿ ಬಹುಪತ್ನಿತ್ವದ ಅಗತ್ಯವಿಲ್ಲ. ಹಾಗೂ ಕಾನೂನುಬದ್ದ ಬಹುಪತ್ನಿತ್ವದಾಚರಣೆಯೇ ಇಸ್ಲಾಂ ಧರ್ಮೀಯ ಮಹಿಳೆಯರ ಮೇಲಿನ ಶೋಷಣೆಗೆ ಪ್ರಭಲ ಅಸ್ತ್ರವಾಗಿದೆ

ಹಾಗೆಯೇ ತ್ರಿವಳಿ ತಲ್ಲಾಕ್ ಸಹ ಜನರ ಒಳಿತಿಗಾಗಿಯೇ ಮಾಡಿದಂತಹ ಧರ್ಮಸಂಹಿತೆ. ಮನಸ್ಸು ಮುರಿದ ದಂಪತಿಗಳು ಬದುಕು ಪೂರಾ ಕಿತ್ತಾಡಿಕೊಂಡು ನರಕಸದೃಷವಾಗಿ ಬದುಕುವ ಬದಲು ತಲ್ಲಾಕ್ ಮೂಲಕ ವಿಚ್ಚೇದನೆ ತೆಗೆದುಕೊಂಡು ತಮಗಿಷ್ಟವಾದ ರೀತಿಯಲ್ಲಿ ಬದುಕಲಿ ಎನ್ನುವುದೇ ನೀತಿಸಂಹಿತೆಯ ಹಿಂದಿನ ಆಶಯವಾಗಿದೆ. ಗಂಡ ಮಾತ್ರವಲ್ಲ ಹೆಂಡತಿಯೂ ಸಹ ತಲ್ಲಾಕ್ ಕೊಡಬಹುದಾಗಿದೆ. ಕೆಲವಾರು ನೊಂದ ಮಹಿಳೆಯರಿಗೆ ಪದ್ದತಿ ಪತಿಯ ಹಿಂಸೆಯಿಂದ ಪಾರಾಗುವ ದಾರಿಯೂ ಆಗಿದೆ. ಆದರೆ ಲಿಂಗಬೇಧದ ವ್ಯವಸ್ಥೆಯಲ್ಲಿ ಮಹಿಳೆಯರಿಗಿಂತಾ ಪುರುಷರೇ ತಲ್ಲಾಖ್ ಸಂಹಿತೆಯನ್ನು ಅತೀ ಹೆಚ್ಚಾಗಿ ದುರ್ಬಳಿಕೆ ಮಾಡಿಕೊಳ್ಳುತ್ತಿದ್ದಾರೆ. ಮೂಲ ಸಂಹಿತೆಯ ಪ್ರಕಾರ ತಲ್ಕಾಖ್ ಕೊಡುವುದು ಅಷ್ಟು ಸುಲಭವಲ್ಲ. ಅದಕ್ಕೆ ಅನೇಕ ಕಟ್ಟುಪಾಡುಗಳಿವೆ. ಮೂರು ತಲಾಕ್ ನಡುವೆ ನಿರ್ಧಿಷ್ಟ ಸಮಯದ ಅಂತರವಿದೆ. ಆದರೆ ಬರುಬರುತ್ತಾ ಮೂರು ಸಲ ತಲಾಕ್ ಕೂಗಿ ಪತ್ನಿಯಿಂದ ಬಿಡುಗಡೆ ಪಡೆದು ಇನ್ನೊಂದು ಮದುವೆ ಮಾಡಿಕೊಳ್ಳುವ ಗಂಡಸರಿಗೇನೂ ಕೊರತೆಯಿಲ್ಲ. ಇತ್ತೀಚೆಗಂತೂ ಎಸ್ಸೆಮ್ಮೆಸ್, ವಾಟ್ಸಾಪ್, ಪೇಸ್ಬುಕಗಳಲ್ಲಿ ತಲಾಕ್ ಸಂದೇಶ ಕಳಿಸಿ ವೈವಾಹಿಕ ಸಂಬಂಧ ಮುರಿದುಕೊಳ್ಳುವ ಹಂತದವರೆಗೂ ವೈವಾಹಿಕ ಕಟ್ಟಳೆ ದುರುಪಯೋಗಗೊಂಡಿದೆ. ಅಂದರೆ ಮೂಲ ಕಾನೂನು ದುರುಪಯೋಗಕ್ಕೊಳಗಾಗಿ ಮಹಿಳೆಯರ ಶೋಷಣೆಗಾಗಿ ಪುರುಷರಿಗೆ ಸಿಕ್ಕ ಇನ್ನೊಂದು ಅಸ್ತ್ರವಾಗಿದೆ.

ಇದರ ಜೊತೆಗೆ ನಿಕಾಹ್ ಹಲಾಲ್ ಎನ್ನುವ ಇನ್ನೊಂದು ಭಯಾನಕ ಧಾರ್ಮಿಕ ನಿಬಂಧನೆ ಕೂಡಾ ಮಹಿಳೆಯರ ವಿರೋಧಿಯಾಗಿದೆ. ಅಂದರೆ ದಂಪತಿಗಳಿದ್ದರು ತಲಾಕ್ ನಂತರ ಬೇರ್ಪಟ್ಟು ಆಮೇಲೆ ತಮ್ಮ ತಪ್ಪಿನ ಅರಿವಾಗಿ ಮತ್ತೆ ಮರುಮದುವೆಯಾಗಬೇಕೆಂದರೆ ಅದು ಸುಲಭದ್ದಲ್ಲ. ಮಹಿಳೆ ಇನ್ನೊಬ್ಬನನ್ನು ನಿಖಾ ಆಗಿ... ಅವನ ಜೊತೆ ಒಂದು ರಾತ್ರಿಯಾದರೂ ಕಳೆದು, ಅವನಿಂದ ತಲಾಕ್ ಪಡೆದು ಮತ್ತೆ ಮೊದಲಿನ ಗಂಡನ ಜೊತೆಗೆ ಮರುಮದುವೆಯಾಗುವುದೇ ನಿಕಾಹ್ ಹಲಾಲ್ ಎನ್ನುವ ಕಟ್ಟಳೆಯಾಗಿದೆ. ಮದುವೆ ವಿಚ್ಚೇದನೆ ಅಂದರೆ ಮಕ್ಕಳಾಟವಲ್ಲ.. ತಲಾಕ್ ಹೇಳುವಾಗಲೂ ಮತ್ತೆ ಮರುಮದುವೆ ಸುಲಭದ್ದಲ್ಲ ಎಂಬ ಅರಿವಿದ್ದರೆ ತಲಾಕಗಳು ಕಡಿಮೆಯಾಗುತ್ತವೆ ಎಂಬ ಸದಾಶಯದಿಂದಾಗಿ ಕಟಿನವಾದ ಕಟ್ಟಳೆಯನ್ನು ಆಗಿನ ಕಾಲದಲ್ಲಿ ವಿಧಿಸಲಾಗಿತ್ತು. ಆದರೆ ಅದೂ ಕೂಡಾ ಮಹಿಳೆಯರ ಪಾಲಿಗೆ ಉರುಳಾಗಿ ಗಂಡಸರ ಪಾಲಿಗೆ ಮತ್ತೊಂದು ಅಸ್ತ್ರವನ್ನು ವದಗಿಸಿದಂತಾಯಿತು.

ಅಂದರೆ ಮೂರೂ ಧಾರ್ಮಿಕ ನಿಬಂಧನೆಗಳು ಸ್ವಸ್ಥ ಕುಟುಂಬದ ದೃಷ್ಟಿಕೋನದಲ್ಲೇ ಕಟ್ಟಲ್ಪಟ್ಟಿದ್ದವು. ಆದರೆ ಬರುಬರುತ್ತಾ ಅವುಗಳು ದುರುಪಯೋಗಕ್ಕೆ ಒಳಗಾಗಿ ಮಹಿಳೆಯರನ್ನು ಗುಲಾಮರನ್ನಾಗಿಸಿಕೊಳ್ಳುವ ಪರಿಕರಗಳಾದವು. ಅನಕ್ಷರತೆ, ಪರಾವಲಂಬಿತನ ಮತ್ತು ಧರ್ಮಾಧಿಕಾರಿಗಳ ಭಯದಿಂದಾಗಿ ನೊಂದ ಮಹಿಳೆಯರು ಮೂರೂ ಕರಾಳ ಧರ್ಮ ಸಂಹಿತೆಗಳ ವಿರುದ್ದ ಪ್ರತಿಭಟಿಸಲಾರದೇ ಬಲಿಪಶುಗಳಾದರು. ಆಗುತ್ತಿದ್ದಾರೆ. ಪುರುಷಪ್ರಧಾನತೆ ಎನ್ನುವುದು ಮಹಿಳೆಯರನ್ನು ಹದ್ದಿಬಸ್ತಿನಲ್ಲಟ್ಟು ಆಳಲು ಸಂಹಿತೆಗಳನ್ನು ವ್ಯಾಪಕವಾಗಿ ಬಳಸಿತು. 


ಭಾರತದ ಸಂವಿಧಾನದಲ್ಲಿ ಅಂಬೇಡ್ಕರರು ಹಿಂದೂ ಧರ್ಮಿಯರಲ್ಲಿರುವ ಬಹಿಪತ್ನಿತ್ವ ಪದ್ದತಿಯನ್ನು ನಿಷೇಧಿಸಿ ವಿಚ್ಚೇದನೆಯನ್ನು ಕಾನೂನು ವ್ಯಾಪ್ತಿಗೆ ತಂದು ಮಹಿಳೆಯರ ಮೇಲಿನ ಶೋಷಣೆಗೆ ಕಾನೂನಾತ್ಮಕ ರಕ್ಷಣೆಯನ್ನು ಒದಗಿಸಿದರು. ಆದರೆ ಇದನ್ನು ಇಸ್ಲಾಂ ಧರ್ಮೀಯ ಯಥಾಸ್ಥಿತಿವಾದಿಗಳು ವಿರೋಧಿಸಿದರು. ಮುಸ್ಲಿಂ ಸಮುದಾಯದ ವ್ಯಯಕ್ತಿಕ ಆಚರಣೆಗಳು ಧರ್ಮಗ್ರಂಥದ ಕಟ್ಟಳೆಗಳನ್ನು ಆಧರಿಸಿರಬೇಕು ಹಾಗೂ ದೇಶದ ಕಾನೂನು ಅದರಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಮುಸ್ಲಿಂ ಧಾರ್ಮಿಕ ಸಮುದಾಯ ಉಗ್ರವಾಗಿ ಆಗ್ರಹಿಸಿತು. ಹೀಗಾಗಿ ಮುಸ್ಲಿಂ ವ್ಯಯಕ್ತಿಕ ವೈವಾಹಿಕ ಕಾನೂನುಗಳು ಈಗಲೂ ಧರ್ಮಾಧಾರಿತವಾಗಿಯೇ ನಡೆಯುತ್ತವೆ. ಬಹುಸಂಖ್ಯಾತ ಮಹಿಳೆಯರು ಲಿಂಗತಾರತಮ್ಯಕ್ಕೆ ಒಳಗಾಗಿ ಪುರುಷರ ಅಡಿಯಾಳಾಗಿ ಬದುಕುತ್ತಿದ್ದಾರೆ. ಲಿಂಗಸಮಾನತೆ ಹಾಗೂ ಘನತೆಯ ಬಾಳು ಮಹಿಳೆಯರಿಗೆ ಮರೀಚಿಕೆಯಾಗಿದೆ. ಹಿಂದೂ ಮಹಿಳೆಯರಿಗೆ ಮದುವೆ ಹಾಗೂ ವಿಚ್ಚೇದನೆಗಳ ವಿಷಯದಲ್ಲಿ ಸಾಂವಿಧಾನಿಕ ರಕ್ಷಣೆ ಮತ್ತು ಪರಿಹಾರಗಳಿವೆ. ಆದರೆ ಮುಸ್ಲಿಂ ಮಹಿಳೆಯರಿಗೆ ಅದೂ ಇಲ್ಲವಾಗಿದೆ.


ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯಾಗಬೇಕು ಎಂದು ನೊಂದ ಇಸ್ಲಾಂ ಮಹಿಳೆಯರು ಸರಕಾರವನ್ನು ಆಗ್ರಹಿಸುತ್ತಿಲ್ಲ... ಅವರ ಬದಲಾಗಿ ಹಿಂದೂ ಮೂಲಭೂತವಾದಿಗಳು ಆಗ್ರಹಿಸುತ್ತಲೇ ಬಂದಿದ್ದಾರೆ. ಇವರಿಗೆ ಮುಸ್ಲಿಂ ಮಹಿಳೆಯರ ಬಗ್ಗೆ ಕಾಳಜಿ ಇದೆಯೆಂದಲ್ಲ.... ಇಸ್ಲಾಂ ಧರ್ಮದಲ್ಲಿರುವ ಬಹುಪತ್ನಿತ್ವ ಪದ್ದತಿಯಿಂದ ಅದೆಲ್ಲಿ ಮಕ್ಕಳು ಹೆಚ್ಚಾಗಿ ದೇಶದಲ್ಲಿ ಹಿಂದೂಗಳಿಗಿಂತಾ ಮುಸ್ಲಿಂನವರ ಸಂತತಿ ಹೆಚ್ಚಾಗಿ ಬಿಡುತ್ತದೋ, ಎಲ್ಲಿ ಅಲ್ಪಸಂಖ್ಯಾತರಾಗಿರುವವರು ಬಹುಸಂಖ್ಯಾತರಾಗಿ ದೇಶದ ಮೇಲೆ ಅಧಿಕಾರ ಹಿಡಿದು ಪ್ರಾಭಲ್ಯ ಗಳಿಸಿಕೊಳ್ಳುತ್ತಾರೋ ಎನ್ನುವ ಭಯದಿಂದಾಗಿ ಹಿಂದುತ್ವವಾದಿ ಸಂಘ ಪರಿವಾರಿಗಳು ಸಮಾನ ನಾಗರಿಕ ಸಂಹಿತೆಗೆ ಅತ್ಯುಗ್ರವಾಗಿ ಆಗ್ರಹಿಸುತ್ತಿದ್ದಾರೆ. ಈಗ ಅವರದೇ ಸರಕಾರವೂ ಇರುವುದರಿಂದ ಕೇಂದ್ರ ಸರಕಾರವು ದೇಶದ ಸಂವಿಧಾನದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಮುಸ್ಲಿಮರಲ್ಲಿರುವ ತ್ರಿವಳಿ ತಲಾಕ್, ನಿಕಾಹ್ ಹಲಾಲ್ ಮತ್ತು ಬಹುಪತ್ನಿತ್ವವನ್ನು ವಿರೋಧಿಸಿ ಸುಪ್ರಿಂ ಕೋರ್ಟಿಗೆ ಅಫಿಡಿವಿಟನ್ನು ಅಕ್ಟೋಬರ್ 7 ರಂದು ಸಲ್ಲಿಸಿದೆ. ಜ್ಯಾತ್ಯಾತೀತತೆ ಮತ್ತು ಲಿಂಗ ಸಮಾನತೆಯ ಆಧಾರದಲ್ಲಿ ಪದ್ದತಿಗಳ ಮರುಪರಿಶೀಲನೆ ನಡೆಸಬೇಕೆಂದು ಕೇಂದ್ರ ಸರಕಾರದ ಕಾನೂನು ಮತ್ತು ನ್ಯಾಯ ಸಚಿವಾಲಯವು ಉನ್ನತ ನ್ಯಾಯಾಲಯಕ್ಕೆ ಶಿಫಾರಸ್ಸು ಮಾಡಿದೆ. ಲಿಂಗ ಸಮಾನತೆ, ಅಂತರಾಷ್ಟ್ರೀಯ ವೈವಾಹಿಕ ಕಾನೂನುಗಳು ಮತ್ತು ಧಾರ್ಮಿಕ ಆಚರಣೆಗಳು ಹಾಗೂ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಜಾರಿಯಲ್ಲಿರುವ ವೈವಾಹಿಕ ಕಾನೂನುಗಳನ್ನು ಉಲ್ಲೇಖಿಸಿ ಕಾನೂನು ಸಚಿವಾಲಯವು ಚಾರಿತ್ರಿಕವಾದ ಸಮಾನ ನಾಗರಿಕ ಸಂಹಿತೆಯನ್ನು ಶಿಪಾರಸ್ಸನ್ನು ಮಾಡಿದೆ.

ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಮಂಡಳಿ ಮೂರೂ ನಿಬಂಧನೆಗಳು ಧಾರ್ಮಿಕ ಆಚರಣೆಗಳ ಅನಿವಾರ್ಯತೆಗಳಾಗಿವೆ. ಇವುಗಳಲ್ಲಿ ಸರಕಾರ ಹಸ್ತಕ್ಷೇಪ ಮಾಡುವ ಹಾಗಿಲ್ಲವೆಂದು ತಕರಾರು ಅರ್ಜಿ ಸಲ್ಲಿಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸರಕಾರವು ಲಿಂಗ ಅಸಮಾನತೆಯನ್ನು ಪೊಷಿಸುವ ಮುಸ್ಲಿಂ ವೈವಾಹಿಕ ಕಾನೂನುಗಳನ್ನು ಪರಿಗಣಿಸುವಂತಿಲ್ಲ ಹಾಗೂ ಇದು ಸಂವಿಧಾನದ ಧಾರ್ಮಿಕ ಆಚರಣೆಗಳ ರಕ್ಷಣೆಗೆ ಅವಕಾಶ ನೀಡುವ 25 ನೇ ಕಲಂ ಅಡಿಯಲ್ಲಿ ಬರುವುದಿಲ್ಲವೆಂದು ಕೇಂದ್ರ ಸರಕಾರವು ಆಬ್ಜಕ್ಷನ್ ಹಾಕಿದೆ. ಕಾನೂನು ಸಂಘರ್ಷ ನ್ಯಾಯಾಲಯದಲ್ಲಿ ಮುಂದುವರೆದಿದೆ.

20 ಕ್ಕೂ ಹೆಚ್ಚು ಇಸ್ಲಾಂ ದೇಶಗಳು ವೈವಾಹಿಕ ಕಾನೂನುಗಳನ್ನು ಬದಲಾಯಿಸಿ ಮಹಿಳೆಯರ ಹಕ್ಕುಗಳ ರಕ್ಷಣೆಯತ್ತ ಮುಂದಾಗಿವೆ. ಅದು ಭಾರತದಲ್ಲಿ ಯಾಕಾಗಬಾರದು ಎನ್ನುವ ಪ್ರಶ್ನೆ ಕಾಡುತ್ತದೆ. ಮುಸ್ಲಿಂ ವಿರೋಧಿ ದ್ವೇಷ ನೀತಿಯನ್ನೇ ತನ್ನ ಒಡಲಲ್ಲಿಟ್ಟುಕೊಂಡೇ ಹುಟ್ಟಿದ ಬಿಜೆಪಿ ಸರಕಾರಕ್ಕೆ ಮತ್ತು ಅದರ ಪರಿವಾರವನ್ನು ಕಾಡುತ್ತಿರುವುದು ಬಹುಪತ್ನಿತ್ವ ಹಾಗೂ ಮುಸ್ಲಿಂ ಜನಸಂಖ್ಯಾಭಿವೃದ್ದಿಯ ಭೂತಗಳು. ಅದಕ್ಕೆಂದೇ ಆರೆಸ್ಸೆಸ್ಸ ಮುಖ್ಯಸ್ಥ ಹಿಂದೂ ಮಹಿಳೆಯರು ಸಾಧ್ಯವಾದಷ್ಟೂ ಮಕ್ಕಳನ್ನು ಹೆತ್ತು ಹಿಂದೂಗಳ ಜನಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಕರೆ ಕೊಟ್ಟಿದ್ದು. ಮೂಲಭೂತವಾದಿಗಳ ಜನಸಂಖ್ಯೆ ಹೆಚ್ಚಿಸುವ ಪೈಪೋಟಿಯಲ್ಲಿ ಭಾರತದ ಜನಸಂಖ್ಯೆ ಹೆಚ್ಚಿ ಆರ್ಥಿಕ ಅಸಮಾನತೆಗೆ ಕಾರಣವಾಗುತ್ತದೆಂಬ ಕನಿಷ್ಟ ಕಲ್ಪನೆಯೂ ಇಲ್ಲವಾಗಿದೆ. ಪ್ರಾಕೃತಿಕ ಸಂಪನ್ಮೂಲಗಳು ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚುವುದಿಲ್ಲ... ಸಂಪನ್ಮೂಲಗಳ ಕೊರತೆಯಿಂದಾಗಿ ಇಡೀ ದೇಶದಲ್ಲಿ ಮುಂದೊಮ್ಮೆ ನೀರು, ಆಹಾರ, ಭೂಮಿಗಳಿಗಾಗಿ ಆಹಾಕಾರ ಉಂಟಾಗುವುದರಲ್ಲಿ ಸಂದೇಹವಿಲ್ಲ.

ಕುರಾನಿನಲ್ಲಿ ಹೇಳಿದ ಹಾಗೆ ಒಂದು ಜನಾಂಗವು ತನ್ನ ಸ್ಥಿತಿಯನ್ನು ಬದಲಾಯಿಸಲು ಉದ್ದೇಶಿಸದ ಹೊರತು ಅಲ್ಲಾಹನು ಕೂಡ ಜನಾಂಗದ ಸ್ಥಿತಿಯನ್ನು ಬದಲಾಯಿಸಲಾರ ಎಂಬುದು ಬಹಳ ಸತ್ಯವಾದ ಮಾತು. ಕಾಲ ಬದಲಾಗಿದೆ. ಮಹಿಳೆಯರಿಗೂ ತಮ್ಮ ಹಕ್ಕಿನ ಅರಿವಾಗಿದೆ. ಇಸ್ಲಾಂ ಧರ್ಮೀಯರಲ್ಲಿ ಅನೇಕ ಹೆಣ್ಮಕ್ಕಳು ವಿದ್ಯಾವಂತರಾಗಿದ್ದಾರೆ. ಈಗ ಅವರೂ ಸಮಾನತೆ ಕೇಳುತ್ತಿದ್ದಾರೆ. ಆದ್ದರಿಂದ ಇಸ್ಲಾಂ ಜನಾಂಗವೇ ತನ್ನ ಪರಿಸ್ಥಿತಿಯನ್ನು ಕಾಲಕ್ಕೆ ತಕ್ಕಂತೆ ಬದಲಾಯಿಸಬೇಕಿದೆ. ಮಹಿಳೆಯರ ಮೇಲೆ ಶೋಷಣೆಗಾಗಿ ಬಹುತೇಕ ಬಳಕೆಯಾಗುತ್ತಿರುವ ಇಸ್ಲಾಂ ವ್ಯಯಕ್ತಿಕ ಕಾನೂನುಗಳನ್ನು ಬದಲಾಯಿಸಬೇಕಿದೆ. ಇಸ್ಲಾಂ ಮಹಿಳೆಯರೂ ಕೂಡಾ ಘನತೆಯಿಂದ ಬಾಳುವಂತಹ ವಾತಾವರಣವನ್ನು ಕಲ್ಪಿಸಿಕೊಡಬೇಕಾಗಿದೆ.

ಸಮಾನ ನಾಗರಿಕ ನೀತಿ ಸಂಹಿತೆ ಕಾನೂನು ಜಾರಿಗೆ ಬಂದರೆ ಮಹಿಳೆಯರ ಮೇಲೆ ಪುರುಷರ ಶೋಷಣೆ ನಿಂತು ಬಿಡುತ್ತದೆ ಎನ್ನುವಂತಿಲ್ಲ. ಈಗಾಗಲೇ ಹಿಂದೂ ವೈವಾಹಿಕ ಕಾನೂನೂಗಳು ಮಹಿಳೆಯರ ಪರವಾಗಿಯೇ ಇದ್ದರೂ ಈಗಲೂ ಬಹುತೇಕ ಹಿಂದೂ ಮಹಿಳೆಯರು ಪುರುಷರ ಹತೋಟಿಯಲ್ಲಿಯೇ ಬದುಕು ಸವೆಸುತ್ತಿದ್ದಾರೆ. ಕೌಟುಂಬಿಕ ದೌರ್ಜನ್ಯಗಳು ಹಾಗೂ ಆತ್ಮಹತ್ಯೆಗಳು ಆಗಾಗ ವರದಿ ಯಾಗುತ್ತಲೇ ಇರುತ್ತವೆ. ನೊಂದ ಮಹಿಳೆಯರಿಗೆ ನ್ಯಾಯದಾನ ಅಂದುಕೊಂಡಷ್ಟು ಸಮರ್ಪಕವಾಗಿಲ್ಲ. ಆದರೆ ಪುರುಷರ ದೌರ್ಜನ್ಯ ವಿರೋಧಿಸುವ ಮಹಿಳೆಯರಿಗೆ ಕಾನೂನು ರಕ್ಷಣೆ ಇದೆ ಎನ್ನುವ ಸಮಾಧಾನವಾದರೂ ಮಹಿಳೆಯರಿಗಿದೆ.. ಹಾಗೂ ಅತಿಯಾಗಿ ಹಿಂಸೆ ಮಾಡಿದರೆ ಕಾನೂನಿನ ವಿಚಾರಣೆಗೆ ಗುರಿಯಾಗಬೇಕಾಗುತ್ತದೆ ಎಂಬ ಕನಿಷ್ಟ ಭಯವಾದರೂ ಹಿಂದೂ ಪುರುಷರಿಗಿದೆ. ಕನಿಷ್ಟ ಅಷ್ಟಾದರೂ ಕಾನೂನಾತ್ಮಕ ರಕ್ಷಣೆ ಇಸ್ಲಾಂ ಸಹೋದರಿಯರಿಗೂ ಸಿಗಬೇಕಿದೆ. ಅದಕ್ಕಾಗಿ ಇಸ್ಲಾಂ ಧಾರ್ಮಿಕ ವೈವಾಹಿಕ ಕಟ್ಟಳೆಗಳು ಬದಲಾಗಬೇಕಿವೆ. ಸಂಘಪರಿವಾರ ತರಲು ಹೊರಟಿರುವ ಸಮಾನ ನಾಗರೀಕ ಸಂಹಿತೆಯಲ್ಲಿ ಹಿಡನ್ ಅಜೆಂಡಾಗಳಿವೆ. ಧಾರ್ಮಿಕ ರಾಜಕೀಯವೂ ಇದೆ. ಆದ್ದರಿಂದ ಇದನ್ನು ಎರಡೂ ಧರ್ಮದ ಅಧೀಕೃತ ಹಾಗೂ ಅನಧೀಕೃತ ವಕ್ತಾರರುಗಳು ಧಾರ್ಮಿಕ ಅಸಹನೆ ಹಾಗೂ ವೈಷಮ್ಯದ ಪೈಪೋಟಿಯ ಭಾಗವಾಗಿ ನೋಡದೇ ಮಹಿಳಾ ಹಿತದೃಷ್ಟಿಯಿಂದ ಸಂಹಿತೆಗೆ ಸೂಕ್ತ ಬದಲಾವಣೆ ತರಬೇಕಿದೆ. ದೇಶ ಧರ್ಮ ಯಾವುದಾದರೇನು ಮಹಿಳೆಯರು ಗೌರವಯುತವಾಗಿ ಬದುಕುವಂತಹ ವಾತಾವರಣವನ್ನು ಪುರುಷ ಕುಲ ಸೃಷ್ಟಿಸಬೇಕಾಗಿದೆ. ಇದರಲ್ಲಿ ಮಾನವ ಕುಲದ ನೆಮ್ಮದಿ ಇದೆ.
- ಶಶಿಕಾಂತ ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ