ಶನಿವಾರ, ಅಕ್ಟೋಬರ್ 15, 2016

ತಹ ತಹ .....44 ಕಲಾವಿದರಿಗೆ ಕಲೆಯೇ ಧರ್ಮ; ಕಲಾವಿದರ ನಿಷೇಧಿಸುವುದು ಅಧರ್ಮ:



ಮನುಷ್ಯರನ್ನ ಮನುಷ್ಯರನ್ನಾಗಿ ನೋಡದೆ ಜನರನ್ನು ಜಾತಿ ಕುಲ ಮತಗಳಲ್ಲಿ ವಿಭಜಿಸಿ ತನ್ನ ಮನುವಾದಿ ಅಸ್ತಿತ್ವದ ಉಳುವಿಗಾಗಿ ಹಿಂದುತ್ವ ಎನ್ನುವ ಪುರೋಹಿತಶಾಹಿ ಕಪೋಲ ಕಲ್ಪಿತ ಧರ್ಮ ಮಾಡಿದ ಮತ್ತು ಮಾಡುತ್ತಿರುವ ಅಮಾನವೀಯ ಕೃತ್ಯಗಳಿಗೆ ಕೊನೆಮೊದಲಿಲ್ಲ. ಧರ್ಮಾಂದರು ಅದೆಷ್ಟು ಬೌದ್ದಿಕ ದಾರಿದ್ರ್ಯತೆ ಹೊಂದಿದ್ದಾರೆಂದರೆ ಕಲಾವಿದರನ್ನೂ ಸಹ ಜಾತಿ ಧರ್ಮದ ಹೆಸರಲ್ಲಿ ವಿಭಾಗಿಕರಿಸುತ್ತಿದ್ದಾರೆ.

ಭಾರತೀಯ ರಂಗಭೂಮಿ ಹಾಗೂ ಸಿನೆಮಾ ಕ್ಷೇತ್ರದ ಅಪರೂಪದ ಕಲಾವಿದ ನವಾಜುದ್ಧೀನ್ ಸಿದ್ದಕಿಯವರ ಅಭಿನಯದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮತಾಂಧರು ದಮನಮಾಡಿ ತಮ್ಮ ಅಟ್ಟಹಾಸ ಮೆರೆದಿದ್ದಾರೆ. ಇಸ್ಲಾಂ ಧರ್ಮೀಯನಾಗಿದ್ದರಿಂದ ಸಿದ್ದಕಿ ತನ್ನದೇ ಹುಟ್ಟೂರಾದ ಉತ್ತರ ಪ್ರದೇಶದ ಬುದಾನ್ ಎಂಬ ಗ್ರಾಮದಲ್ಲಿ ನಡೆಯುವ ರಾಮಲೀಲಾ ಉತ್ಸವದಲ್ಲಿ ಭಾಗವಹಿಸದಂತೆ ಹಿಂದೂ ಮೂಲಭೂತವಾದಿಗಳು ಪತ್ವಾ ಹೊರಡಿಸಿವೆ.

ಕಲೆಗೆ ಹಾಗೂ ಕಲಾವಿದನಿಗೆ ಯಾವುದೇ ಜಾತಿ ಧರ್ಮ ಭಾಷೆ ದೇಶದ ಹಂಗಿಲ್ಲವೆಂದು ಮತಾಂಧರಿಗೆ ಯಾರು ತಿಳಿಹೇಳುವುದು. ಇವರು ಆರಾಧಿಸುವ ದೇವರೇ ಬಂದು ಹೇಳಿದರೂ ನಂಬದ ಮನೋವಿಕಾರ ಪೀಡಿತರಿಂದಾಗಿ ಇಡೀ ದೇಶವೇ ಇಂದು ಅಸಹಿಷ್ಣುತತೆಯಿಂದ ಬೇಯುತ್ತಿದೆ.

ಅದ್ಯಾಕೋ ಮತಾಂಧರ ದೇಶಗಳಲಿ ಕಲೆ ಕಲಾವಿದರಿಗೆ ಬೆಲೆಯೇ ಇಲ್ಲ. ಎಲ್ಲದರಲ್ಲೂ ಬರೀ ಜಾತಿ ಧರ್ಮಗಳ ಲೆಕ್ಕಾಚಾರ. ಯಾವುದೇ ನಾಟಕ ಸಿನೆಮಾದಲ್ಲಿ ನಟಿಸುವ ನಟರುಗಳು ಎಲ್ಲಾ ವರ್ಗ ಧರ್ಮದವರಿಗೆ ಸಲ್ಲುವ ಕಲಾವಿದರೇ ಹೊರತು ಯಾವುದೇ ಒಂದು ಧರ್ಮದ ವಕ್ತಾರರಲ್ಲ. ನಾಸಿರುದ್ದೀನ್ ಶಾ, ಅಮೀರ್ ಖಾನ್, ಇರ್ಫಾನ್, ಸಿದ್ದಿಕಿ...ಇಂತಹ ಅಭಿಜಾತ ಕಲಾವಿದರನ್ನು ಭಾರತೀಯರು ಕಲಾವಿದರಾಗಿ ಗೌರವಿಸುತ್ತಾರೆಯೇ ಹೊರತು ಮುಸ್ಲಿಂ ಧರ್ಮದವರೆಂದು ನಿರಾಕರಿಸುವುದಿಲ್ಲ.

ಹಿಂದೆ ಇದೇ ಹಿಂದುತ್ವದ ಇನ್ನೊಬ್ಬ ಪಕ್ಕಾ ಹರಿಕಾರರಾಗಿದ್ದ ಶಿವಸೇನೆಯ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆಯವರು ಸ್ವತಃ ಕ್ರಿಶ್ಚಿಯನ್ ಧರ್ಮೀಯ ನೃತ್ಯ ಕಲಾವಿದ ಮೈಕಲ್ ಜಾಕ್ಸನ್ನನನ್ನು ಬಾಂಬೆಗೆ ಆಹ್ವಾನಿಸಿ ಅದ್ದೂರಿಯಾಗಿ ಸನ್ಮಾನಿಸಿದ್ದರು. ಯಾಕೆ ಎಂದು ಪತ್ರಕರ್ತನೊಬ್ಬ ಪ್ರಶ್ನಿಸಿದಾಗ 'ಅವನೊಬ್ಬ ಕಲಾವಿದ, ಅದಕ್ಕೆ ಸನ್ಮಾನಿಸಿದೆ' ಎಂದು ಉತ್ತರಿಸಿದ್ದರು. ಕಟ್ಟರ್ ಹಿಂದುತ್ವವಾದಿಯಾಗಿದ್ದ ಠಾಕ್ರೆಯವರಿಗಿರುವ ಕನಿಷ್ಟ ಪರಿಜ್ಞಾನವೂ ಮತಾಂಧರಿಗೆ ಇಲ್ಲವಾಯಿತು. ಅಷ್ಟಕ್ಕೂ ಸಿದ್ದಕಿಯವರು ಬಯಸಿದ್ದು ದೇವಸ್ಥಾನದಲ್ಲಿ ಪ್ರವೇಶವನ್ನಲ್ಲ, ರಾಮಲೀಲಾದಲ್ಲಿ ಅಭಿನಯಿಸಲು ಅವಕಾಶವನ್ನು. ಒಬ್ಬ ಕಲಾವಿದನಾಗಿ ತನ್ನ ಸ್ವಂತ ಊರಲ್ಲಿ ಪರಿಚಯಸ್ತ ಜನರ ಮುಂದೆ ತನ್ನ ಪ್ರತಿಭೆಯನ್ನು ತೋರಿಸಬೇಕು ಎಂದು ಸಿದ್ದಿಕಿಯವರು ಬಯಸಿದ್ದಲ್ಲಿ ತಪ್ಪಾದರೂ ಏನಿದೆ. ಆದರೆ ಮನುವಾದಿ ಪೀಡಿತರ ಮುಂದೆ ಕಲೆ ಧರ್ಮಾತೀತ ಎಂದು ಹೇಳುವುದೂ ಒಂದೇ, ಕೋಣನ ಮುಂದೆ ಕಿನ್ನುರಿ ಬಾರಿಸುವುದೂ ಒಂದೇ.

ಇತ್ತೀಚೆಗೆ ಉದ್ದೋನ್ಮಾದವನ್ನು ತಲೆಗೇರಿಸಿಕೊಂಡ ದೇಶಭಕ್ತರು ಪಾಕಿಸ್ತಾನದ ಕಲಾವಿದರು ಭಾರತದಲ್ಲಿ ಪ್ರದರ್ಶನ ಕೊಡುವುದನ್ನು ವಿರೋಧಿಸಿ ನಿಷೇದಿಸುವಂತೆ ಮಾಡಿದರು. ಇದು ತಪ್ಪು ಎಂದು ಹೇಳಿದ ಭಾರತೀಯ ಹೆಸರಾಂತ ಕಲಾವಿದರ ಮೇಲೆ ಬೆಂಕಿ ಕಾರತೊಡಗಿದರು. ಭಾರತ ಪಾಕಿಸ್ಥಾನದ ಕದನದಲಿ ಎರಡೂ ದೇಶದ ಕಲಾವಿದರೇಕೆ ಬಲಿಪಶುಗಳಾಗಬೇಕು. ಸಿದ್ದಕಿ ಏನು ಇವರ ರಾಮಲೀಲಾದಲ್ಲಿ ಬಾಂಬು ಹಾಕುತ್ತಿದ್ದರಾ? ಇಲ್ಲಾ ಪಾಕಿಸ್ತಾನದ ಕಲಾವಿದರು ಕಲೆಯ ಬದಲು ಭಯೋತ್ಪಾದನೆಗೆ ಪ್ರಚೋದಿಸುತ್ತಿದ್ದರಾ?

ಖ್ಯಾತ ಕಲಾವಿದ ಎಂ.ಎಪ್.ಹುಸೇನರವರನ್ನು ಕೊನೆಗಾಲದಲ್ಲಿ ನೆಮ್ಮದಿಯಾಗಿರಲೂ ಬಿಡದೇ ಸತಾಯಿಸಿದ ಮತಾಂಧರು ಪ್ರಖ್ಯಾತ ಕಲಾವಿದ ಅಮೀರ್ ಖಾನ್ ರನ್ನೂ ವರ್ಷಗಳ ಕಾಲ ಕಾಡಿದರು. ಸಹಿಷ್ಣುತತೆ ಎನ್ನುವುದು ಎಲ್ಲಾ ಧರ್ಮಗಳ ಆಶಯವಾಗಬೇಕಿತ್ತು. ಆದರೆ ಧರ್ಮಗಳೇ ಹಿಂಸೆ, ಅಸೂಯೆ, ಅಸಹಿಷ್ಣುತತೆಯನ್ನು ಉತ್ಪಾದಿಸುತ್ತಿರುವುದು ಧರ್ಮದೊಳಗಿನ ಟೊಳ್ಳುತನವನ್ನು ಬಯಲುಗೊಳಿಸುತ್ತದೆ. ಎಲ್ಲಿ ನಮ್ಮ ಧರ್ಮ ನಶಿಸಿ ಹೋಗುತ್ತದೋ ಎನ್ನುವ ಅಭದ್ರತೆ ಧರ್ಮಾಂಧ ಅನುಯಾಯಿಗಳನ್ನು ಸದಾ ಕಾಡುತ್ತಲೇ ಇರುತ್ತದೆ. ಹೀಗಾಗಿ ಯಾರೋ ಹೇಳುವ ಸಣ್ಣ ಸತ್ಯವನ್ನೂ ಅರಗಿಸಿಕೊಳ್ಳಲಾರದೇ ಬಲವಂತವಾಗಿ ಬಾಯಿಮುಚ್ಚಲು ಪ್ರಯತ್ನಿಸಲಾಗುತ್ತದೆ. ಅನ್ಯ ಧರ್ಮೀಯ ಕಲಾವಿದರಿಗೂ ಹೆದರಿ ಬಹಿಷ್ಕರಿಸುವ ದುಸ್ಸಾಹಕ್ಕೆ ಮುಂದಾಗುತ್ತದೆ. ಇದಕ್ಕೆ ಇಸ್ಲಾಂ ಮತಾಂಧರೂ ಹೊರತಲ್ಲ. ಹಿಂಸೆ ದಬ್ಬಾಳಿಕೆ, ದಮನಗಳಿಂದ ತಮ್ಮ ಮಹಾನ್ ಧರ್ಮಗಳ ಬೇರುಗಳನ್ನು ಗಟ್ಟಿಗೊಳಿಸಬೇಕೆಂದು ಎಲ್ಲಾ ಜೀವವಿರೋಧಿ ಧರ್ಮಗಳು ಸದಾ ಪ್ರಯತ್ನಿಸುತ್ತಲೇ ತಮ್ಮ ಧರ್ಮದೊಳಗಿನ ಟೊಳ್ಳುತನದ ತೂತುಗಳನ್ನು ಮುಚ್ಚಿಕೊಳ್ಳಲು ಹವಣಿಸುತ್ತವೆ.

ಕಲೆ ಹಾಗೂ ಕಲಾವಿದರು ಧರ್ಮಾತೀತರು, ದೇಶ ಭಾಷೆ ಗಡಿಗಳ ಮಿತಿಗಳನ್ನು ಮೀರಿವಂತವರು ಎಂಬುದನ್ನು ಎಲ್ಲಾ ಧರ್ಮಗಳೊಳಗಿರುವ ಮತಾಂಧರು ಅರಿಯಬೇಕಿದೆ. ಅಕಸ್ಮಾತ್ ಯಾವುದಾದರೂ ಕಲಾವಿದ ಧರ್ಮಾಂಧನಾಗಿದ್ದರೆ ಆತ ನಿಜವಾದ ಕಲಾವಿದನಾಗಿರದೇ 

ಕಲಾವಿದನ ವೇಷದೊಳಗಿನ ಮತಾಂಧನಾಗಿರುತ್ತಾನೆ. ಎಲ್ಲರ ಒಳಿತನ್ನು ಬಯಸುವವರು, ಎಲ್ಲರಿಗಾಗಿ ತನ್ನ ಪ್ರತಿಭೆ ಮೀಸಲೆಂದು ತಿಳಿದವರು, ಹಾಗೂ ಮಾನವೀಯತೆಯನ್ನು ಉಸಿರಾಡುವವರು ಅಪ್ಪಟ ಜನಮುಖಿ ಕಲಾವಿದರಾಗುತ್ತಾರೆ. ಅಂತಹ ಕಲಾವಿದರನ್ನು ಜಾತಿ ಧರ್ಮ ದೇಶ ಭಾಷೆಯ ಚೌಕಟ್ಟಿಗೊಳಗೆ ಬಂಧಿಸಿ ಸನ್ಮಾನಿಸುವುದು ಇಲ್ಲವೇ ನಿಷೇಧಿಸುವಿದು ಎರಡೂ ಅಕ್ಷಮ್ಯ.


ಉತ್ತಮ ಕಲಾವಿದನೆಂದು ನಾವೆಲ್ಲಾ ಗೌರವಿಸುವ ನಾನಾ ಪಾಟೇಕರ್ ಎನ್ನುವ ತಿಕ್ಕಲು ಹಿಂದಿ ಭಾಷಾ ಸಿನೆಮಾ ನಟ " ದೇಶದ ಮುಂದೆ ಕಲಾವಿದರು ತಿಗಣೆ ಇದ್ದ ಹಾಗೆ. ದೇಶ ಕಾಯುವ ಸೈನಿಕರು ನಿಜವಾದ ಹೀರೋಗಳು. ಅವರಿಗಿಂತಲೂ ಪಾಕ್ ಕಲಾವಿದರು ಹೆಚ್ಚೇನಲ್ಲ. ನಾವು ತಾಯ್ನಾಡಿನ ಹಿತ ಕಾಯಬೇಕೆ ಹೊರತು ಶತ್ರು ದೇಶದ ಕಲಾವಿದರ ಬೆಂಬಲಕ್ಕೆ ನಿಲ್ಲಬಾರದು" ಎಂದು ಹೇಳಿದ್ದಾರೆ. ನಾನಾರವರ ನಾನಾ ನಮೂನಿಯ ಸಿನೆಮಾಗಳನ್ನು ಭಾರತದ ಹಾಗೇ ಪಾಕಿಸ್ಥಾನೀಯರೂ ನೋಡಿ ಆನಂದಿಸಿ ಲಾಭದೊರಕಿಸಿಕೊಟ್ಟಿದ್ದನ್ನು ವಿಕ್ಷಿಪ್ತ ನಟ ಮರೆತಂತಿದೆ. ಅಭಿಮಾನವಿದ್ದರೆ ಸೈನಿಕರನ್ನು ಹಾಡಿ ಹೊಗಳಲಿ. ಆದರೆ ಕಲಾವಿದರನ್ನು ತಿಗಣೆ ಎಂದು ಡೀಗ್ರೇಡ್ ಮಾಡಿ ಮಾತಾಡುವ ಹಕ್ಕು ನಟನಿಗೆ ಇಲ್ಲ. ಸೈನ್ಯಕ್ಕೂ ಕಲೆಗೂ ಯಾವುದೇ ಸಂಬಂಧವೂ ಇಲ್ಲ. ಸೈನಿಕರು ದೇಶಕಾಯುವ ತಮ್ಮ ಕರ್ತವ್ಯವನ್ನು ನಿಭಾಯಿಸುವಂತೆಯೇ ಕಲಾವಿದರು ಸಮಾಜದ ಸ್ವಾಸ್ಥ್ಯ ಕಾಯ್ದುಕೊಳ್ಳುವ ಹೊಣೆಗಾರಿಕೆಯನ್ನು ನಿಭಾಯಿಸುತ್ತಾರೆ. ಸೈನಿಕರಿಗೆ ಕಲಾವಿದರನ್ನು ಹೋಲಿಸಿ ತಿಗಣೆಗಳು ಎನ್ನುವುದು ನಟನ ಬೌದ್ದಿಕ ಅದಪತನಕ್ಕೆ ಸಾಕ್ಷಿಯಾಗಿದೆ.

ಭಯೋತ್ಪಾದನೆಯನ್ನು ಬಲವಾಗಿ ಖಂಡಿಸುತ್ತೇನೆಂದು ಪಾಕಿಸ್ತಾನಿ ನಟಿ ಮಹಿರಾಖಾನ್ ಹೇಳಿಕೆ ಕೊಟ್ಟಿದ್ದಾರೆ. ಹಾಗಾದರೆ ನಾನಾ ಪಾಟೇಕರ್ ಪ್ರಕಾರ ತಿಗಣಿಯಮ್ಮಳೂ ಶತ್ರು ಅಂದಂಗಾಯ್ತು. ಜಗತ್ತಿನ ಯಾವುದೇ ಕಲಾವಿದರೂ ಎಂದೂ ಹಿಂಸೆಯನ್ನು, ಯುದ್ದವನ್ನೂ ಹಾಗೂ ಭಯೋತ್ಪಾದನೆಯನ್ನು ಎಂದೂ ಬೆಂಬಲಿಸುವುದಿಲ್ಲ. ಹಾಗೇನಾದರೂ ಬೆಂಬಲಿಸಿದರೆ ಅವರು ಕಲಾವಿದರೇ ಅಲ್ಲ. ಆಳುವ ವ್ಯವಸ್ಥೆಗಳಿಂದ ಅನೇಕ ಸಂಕಟಗಳಿಗೆ ಗುರಿಯಾದ ಶ್ರೇಷ್ಟ ನಟ ಚಾರ್ಲಿ ಚಾಪ್ಲಿನ್ ಯುದ್ದ ವಿರೋಧಿಯಾಗಿದ್ದರು. ತಮ್ಮ ಬಹುತೇಕ ಸಿನೆಮಾಗಳಲ್ಲಿ ಹಿಂಸೋತ್ಪಾದನೆಯನ್ನು ಲೇವಡಿ ಮಾಡಿದ್ದಾರೆ. ದಿ ಗ್ರೇಟ್ ಡಿಕ್ಟೇಟರ್ ಸಿನೆಮಾದಲ್ಲಿ ಹಿಟ್ಲರನ ಯುದ್ದೋನ್ಮಾದವನ್ನು ನಗೆಪಾಟಲೀಗೀಡಾಗಿಸಿದ್ದರು. ಚಾಪ್ಲೀನ್ ರವರಂತಹ ಮಾನವತಾವಾದಿಯನ್ನು ಒಂದು ದೇಶ, ಭಾಷೆ, ಧರ್ಮಕ್ಕೆ ಸೀಮಿತಗೊಳಿಸಲು ಎಂದಾದರೂ ಸಾಧ್ಯವೇ. ಅದೇ ರೀತಿ ಜನಪರ ಹಾಗೂ ಜೀವಪರವಾಗಿರುವ ಎಲ್ಲಾ ರೀತಿಯ ಕಲಾವಿದರುಗಳು ಜಾತಿ ಧರ್ಮ ದೇಶ ಭಾಷೆಗಳನ್ನು ಮೀರಿದ ವಿಶ್ವಮಾನವರು. ಅವರನ್ನು ಒಂದು ಚೌಕಟ್ಟಿಗೆ ಅಳವಡಿಸುವುದೇ ಆಗಲಿ ಇಲ್ಲವೇ ನಿಷೇಧಿಸುವುದೇ ಆಗಲಿ ಮಾಡುವುದು ಬೌದ್ದಿಕ ದಾರಿದ್ರ್ಯದ ಸಂಕೇತವಾಗಿದೆ. ಪ್ಯಾಸಿಸ್ಟ್ ಮನೋಭಾವವಾಗಿದೆ. ಇಂತಹ ಮನೋವ್ಯಾಧಿಗಳ ವಿರುದ್ದ ಕಲಾವಿದರೆಲ್ಲಾ ಒಂದಾಗಿ ನಿಲ್ಲಬೇಕಿದೆ. ಜಗತ್ತಿನ ಎಲ್ಲಾ ಜನಪರ ಕಲಾವಿದರ ಐಕ್ಯತೆ ಚಿರಾಯುವಾಗಲಿ.

- ಶಶಿಕಾಂತ ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ