ಮಹಿಳಾ ವಿರೋಧಿ ವೈಯಕ್ತಿಕ ಕಾನೂನು ತೊಲಗಲಿ; ಮುಸ್ಲಿಂ ಮಹಿಳೆಯರಿಗೂ ಸಾಂವಿಧಾನಿಕ ರಕ್ಷಣೆ ಸಿಗಲಿ:
ಧರ್ಮ ಯಾವುದೇ ಆಗಿರಲಿ ತನ್ನ ಚಲನಶೀಲತೆ ಕಳೆದುಕೊಂಡರೆ, ಕಾಲದ ಅಗತ್ಯಕ್ಕೆ ತಕ್ಕಂತೆ ಬದಲಾಗದಿದ್ದರೆ ಅದು ನಿಂತ ನೀರಂತಾಗಿ ಕೊಳೆತು ನಾರತೊಡಗಿ ತಾನು ಪ್ರತಿನಿಧಿಸುವ ಜನಾಂಗವನ್ನು ಅಸ್ವಸ್ಥಗೊಳಿಸುತ್ತದೆ. ನಿರಂತರ ಪರಿವರ್ತನೆಯೇ ಜಗದ ನಿಯಮವಾಗಿರುವಾಗ ತಾನೂ ಬದಲಾಗುವುದಿಲ್ಲ ಹಾಗೂ ತನ್ನ ಜನರನ್ನೂ ಬದಲಾಗಲು ಬಿಡುವುದಿಲ್ಲ ಎನ್ನುವುದು ಪ್ರಕೃತಿ ವಿರೋಧಿತನವಾಗುತ್ತದೆ. ಇದು ಜಗತ್ತಿನ ಎಲ್ಲಾ ಕರ್ಮಠ ಧರ್ಮಗಳಿಗೂ ಅನ್ವಯಿಸುತ್ತದೆ.
ಎಲ್ಲಾ ಧರ್ಮಗಳು ಹಾಗೂ ಅವು ಸೃಜಿಸಿದ ಧರ್ಮಗ್ರಂಥಗಳು ತಾವು ಹುಟ್ಟಿದ ಕಾಲಘಟ್ಟವನ್ನು ಪ್ರತಿನಿಧಿಸುತ್ತವೆ ಮತ್ತು ತಾನು ಪ್ರತಿನಿಧಿಸುವ ಸಮುದಾಯದ ಜನಜೀವನವನ್ನು ನಿಯಂತ್ರಣಕ್ಕೆ ತರಲು ಸಂಹಿತೆಗಳನ್ನು ರೂಪಿಸಿರುತ್ತವೆ. ಆದರೆ ಅವು ಯಾವವೂ ಸಾರ್ವಕಾಲಿಕ ಸತ್ಯಗಳಂತೂ ಅಲ್ಲವೇ ಅಲ್ಲ. ಆಗುವುದೂ ಇಲ್ಲ.
ಹಿಂದೂ ಧರ್ಮ ಅಂತಾ ಈಗ ಏನು ಹೇಳಲಾಗುತ್ತದೆಯೋ ಇದರಲ್ಲಿ ಸಹ ಅನೇಕ ಜೀವ ವಿರೋಧಿ ಅಂಶಗಳಿದ್ದವು. ಈಗಲೂ ಇದ್ದಾವೆ. ಹಿಂದುತ್ವವಾದಿಗಳ ಧಾರ್ಮಿಕ ಸಂವಿಧಾನವಾದ ಮನುಸ್ಮೃತಿಯನ್ನು ಒಮ್ಮೆ ಓದಿದರೆ ಜೀವವಿರೋಧಿತನ ಗೊತ್ತಾಗದೇ ಇರದು. ಶೂದ್ರರಿಗೆ ದಲಿತರಿಗೆ ಹಾಗೂ ಎಲ್ಲಾ ವರ್ಗದ ಮಹಿಳೆಯರಿಗೆ ವಿದ್ಯೆಯನ್ನೇ ಎರಡು ಸಾವಿರ ವರ್ಷಗಳ ಸುದೀರ್ಘ ಕಾಲ ನಿಷೇದಿಸಲಾಗಿತ್ತು. ಮಹಿಳೆಯರನ್ನಂತೂ ಪುರುಷರ ಗುಲಾಮರಂತೆಯೇ ಪರಿಗಣಿಸಲಾಗಿತ್ತು. ಆದರೆ ಕಾಲಘಟ್ಟದ ಅನಿವಾರ್ಯತೆಗೆ ಈ ಎಲ್ಲವೂ ಬದಲಾವಣೆಯಾಗಲೇ ಬೇಕಾಯಿತು. ಬ್ರಿಟೀಷರ ಸಹಕಾರ ಹಾಗೂ ಸಾಹೂ ಮಹರಾಜ್, ಪುಲೆ ದಂಪತಿಗಳು ಹಾಗೂ ಅಂಬೇಡ್ಕರರಂತಹ ಚಿಂತಕರ ಪ್ರಯತ್ನಗಳಿಂದಾಗಿ ವಿದ್ಯೆಯೆನ್ನುವುದು ಎಲ್ಲರಿಗೂ ಮುಕ್ತವಾಗಿ ಅರಿವಿನ ಹಾದಿ ತೆರೆದುಕೊಂಡಿತು ಮತ್ತು ಮಹಿಳೆಯರೂ ಸಹ ಒಂದಿಷ್ಟು ಸ್ವಾತಂತ್ರ್ಯವನ್ನು ಅನುಭವಿಸುವಂತಾಯಿತು. ಇನ್ನೂ ಸಹ ಲಿಂಗಬೇಧ ಹಾಗೂ ಜಾತಿ ಅಸಮಾನತೆ ಸಂಪೂರ್ಣವಾಗಿ ತೊಲಗಿಲ್ಲವಾದರೂ ಅಂಬೇಡ್ಕರರಂತಹ ಮಹಾನುಭಾವರಿಂದಾಗಿ ದಲಿತರರಿಗೆ ದಮನಿತರಿಗೆ ಹಾಗೂ ಮಹಿಳೆಯರಿಗೆ ಕಾನೂನಿನ ರಕ್ಷಣೆಯಾದರೂ ದೊರೆಯಿತು. ಆದರೆ ಈಗಲೂ ಸಹ ಮತಾಂಧ ಹಿಂದುತ್ವವಾದಿ ವರ್ಗವೊಂದು ಮತ್ತೆ ಮನುವಾದಿ ಸಿದ್ದಾಂತಗಳನ್ನೇ ಜಾರಿಯಲ್ಲಿ ತಂದು ಧರ್ಮಾಧಾರಿತ ವ್ಯವಸ್ಥೆಯನ್ನು ಮತ್ತೆ ಈ ದೇಶದಲ್ಲಿ ಪ್ರತಿಷ್ಠಾಪಿಸಲು ಹರಸಾಹಸ ಮಾಡುತ್ತಲೇ ಇದೆ. ಅದಕ್ಕೆ ಪ್ರಜ್ಞಾವಂತರಿಂದ ವಿರೋಧ ವ್ಯಕ್ತವಾಗುತ್ತಲೇ ಇದೆ.
ಅದೇ ರೀತಿ ಇಸ್ಲಾಂ ಧರ್ಮವೂ ಸಹ ಆಗಿನಿಂದಲೂ ತಮ್ಮ ಧರ್ಮ ಗ್ರಂಥದ ಕದಂಬ ಬಾಹುಗಳಲ್ಲಿ ಮುಸ್ಲಿಂ ಸಮುದಾಯವನ್ನು ಸಾಮ ಬೇಧ ದಂಡಾದಿ ಪ್ರಯೋಗಗಳ ಮೂಲಕ ಹಿಡಿದಿಟ್ಟುಕೊಂಡಿದೆ. ಹೇಗೆ ಹಿಂದೂ ಮೂಲಭೂತವಾದಿಗಳು ಈ ದೇಶದ ಸಂವಿಧಾನವನ್ನು ವಿರೋಧಿಸುತ್ತಾರೋ ಹಾಗೆಯೇ ಮುಸ್ಲಿಂ ಧರ್ಮದೊಳಗಿನ ಮೂಲಭೂತವಾದಿಗಳಿಗೂ ಸಹ ಈ ದೇಶದ ಕಾನೂನುಗಳು ಅಪತ್ಯ. ಸಮಾನತೆ ಹಾಗೂ ಜ್ಯಾತ್ಯಾತೀತ ಬುನಾದಿಗಳ ಮೇಲೆ ನಿಂತಿರುವ ಅಂಬೇಡ್ಕರ್ ವಿರಚಿತ ಸಂವಿಧಾನವು ಮತಾಂಧರಿಗೆ ಸಮ್ಮತವಾಗುವುದೂ ಇಲ್ಲ.. ಅವರು ಅದಕ್ಕೆ ಬೆಲೆ ಕೊಡುವುದೂ ಇಲ್ಲ.
ವೈದಿಕಶಾಹಿ ಪ್ರಣೀತ ಹಿಂದೂ ಧರ್ಮದೊಳಗಿನ ಜಾತಿತಾರತಮ್ಯವನ್ನು ಮೀಸಲಾತಿ ಮೂಲಕ ತೆಗೆದುಹಾಕಿ ದಲಿತ ಹಿಂದುಳಿದ ವರ್ಗದ ಜನತೆ ಸ್ವಾಭಿಮಾನದಿಂದ ಬದುಕುವಂತೆ ಮಾಡಿದ ಬಾಬಾಸಾಹೇಬರು ಮಹಿಳೆಯರೂ ಪುರುಷ ಸಮಾನ ಸ್ವಾತಂತ್ರ್ಯವನ್ನು ಹೊಂದಲು ಪುರೋಹಿತಶಾಹಿಗಳ ಪ್ರತಿರೋಧದ ನಡುವೆಯೂ ಕಾನೂನಿನ ರಕ್ಷಣೆ ಒದಗಿಸಿದರು. ಆದರೆ ಅದ್ಯಾಕೋ ಮುಸ್ಲಿಂ ಧರ್ಮದ ತಂಟೆಗೆ ಹೋಗಲಿಲ್ಲ. ಆ ಸಮುದಾಯದ ವ್ಯಯಕ್ತಿಕ ಆಚರಣೆಗಳನ್ನು ಸಾಂವಿಧಾನಿಕ ಕಾನೂನಿನ ವ್ಯಾಪ್ತಿಗೆ ಅಳವಡಿಸದೇ ಕುರಾನಿನ ಮರ್ಜಿಗೆ ಬಿಟ್ಟುಬಿಟ್ಟರು. ಇದಕ್ಕೆ ಬ್ರಿಟೀಷರೇ ಹುಟ್ಟುಹಾಕಿದ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ವಿರೋಧ, ಮುಸ್ಲಿಂ ಮೂಲಭೂತವಾದಿಗಳ ಒತ್ತಡ ಹಾಗೂ ಗಾಂಧೀಜಿಯವರ ಬೆಂಬಲವೂ ಕಾರಣವಾಗಿತ್ತು. ಹೀಗಾಗಿ ಇಸ್ಲಾಂ ಸಮುದಾಯದ ಬಹುತೇಕ ಮಹಿಳೆಯರು ಪುರುಷರ ಇತಿ ಮಿತಿಗಳಲ್ಲೇ ಬದುಕಬೇಕಾದ ಅನಿವಾರ್ಯತೆಗೊಳಗಾದರು.
ಧಾರ್ಮಿಕ ಕಾನೂನುಗಳನ್ನು ದುರುಪಯೋಗಪಡಿಸಿಕೊಂಡು ಮಹಿಳೆಯರ ಮೇಲೆ ದೌರ್ಜನ್ಯ ನಡೆಸುತ್ತಿರುವ ಪುರುಷರ ಮೇಲೆ ಹಾಗೂ ಅಂತವರನ್ನು ಬೆಂಬಲಿಸುತ್ತಿರುವ ಧರ್ಮಾಂದರ ಮೇಲೆ ಆಗಾಗ ಇಸ್ಲಾಂ ಮಹಿಳೆಯರು ಸಿಡಿದೆದ್ದಿದ್ದಾರಾದರೂ ಧರ್ಮದ್ರೋಹದ ಆರೋಪದ ಮೇಲೆ ಅಂತವರ ಬಾಯನ್ನು ಮುಚ್ಚಿಸಲಾಗಿದೆ. ಕೆಲವರ ವಿರುದ್ದ ಪತ್ವಾ ಹೊರಡಿಸಲಾಗಿದೆ. ಇಸ್ಲಾಂ ವ್ಯಯಕ್ತಿಕ ಕಾನೂನನ್ನು ಪ್ರಶ್ನಿಸಿ ಚಂದ್ರಗಿರಿಯ ತೀರದಲ್ಲಿ ಕಾದಂಬರಿ ಬರೆದ ಸಾರಾ ಅಬೂಬ್ಕರರವರಿಗೆ ಬೆದರಿಕೆ ಒಡ್ಡಲಾಗಿದೆ. ಹೀಗಾಗಿ ಮಹಿಳೆಯರು ಮತಾಂಧರ ಮರ್ಜಿಗೊಳಗಾಗಿ ಬದುಕಬೇಕು ಇಲ್ಲವೇ ಧರ್ಮದ್ರೋಹಿಯಾಗಿ ಕಿರುಕುಳ ಅನುಭವಿಸಬೇಕಾಗಿದೆ. ಇಸ್ಲಾಂ ಧರ್ಮದೊಳಗಿನ ಪುರುಷರೆಲ್ಲಾ ಹೀಗೇ ಎಂದು ಹೇಳುವುದು ಸಮಂಜಸವಲ್ಲವಾದರೂ ಬಹುತೇಕರು ಮಹಿಳೆಯರನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಪ್ರಯತ್ನಿಸುವುದಂತೂ ಸತ್ಯ. ಹಾಗೂ ಪ್ರತಿರೋಧಿಸಿದ ಮಹಿಳೆಯರನ್ನು ತಲ್ಲಾಕ್ ಇಲ್ಲವೇ ಬಹುಪತ್ನಿತ್ವದ ಅಸ್ತ್ರ ಬಳಸಿ ದಮನಿಸಲಾಗುತ್ತದೆ. ಇಂತಹುದಕ್ಕೆ ಹಿಂದೂ ಧರ್ಮೀಯ ಪುರುಷರೂ ಹೊರತಲ್ಲವಾದರೂ ಇಲ್ಲಿ ದಮನಿತ ಮಹಿಳೆಗೆ ಕಾನೂನಿನ ರಕ್ಷಣೆ ಇದೆ. ಮುಸ್ಲಿಂ ಮಹಿಳೆಯರಿಗೆ ಅದು ಬೇಕಾಗಿದೆ.
ಈಗ ಸಂಘಪರಿವಾರವು ತಮ್ಮ ಬಹುಕಾಲದ ಹಿಡನ್ ಅಜೆಂಡಾ ಆದ ಏಕರೂಪ ನಾಗರೀಕ ಸಂಹಿತೆಯನ್ನು ಕೇಂದ್ರ ಸರಕಾರದ ಮೂಲಕ ಜಾರಿಗೆ ತರಲು ಹೊರಟಿದೆ. ಈಗಾಗಲೇ ಸುಪ್ರಿಂ ಕೋರ್ಟಲ್ಲಿ ಕೇಂದ್ರ ಸರಕಾರವು ಏಕರೂಪ ಸಂಹಿತೆಗೆ ಒತ್ತಾಯಿಸಿದೆ. ಹಾಗೆಯೇ ಇದನ್ನು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ವಿರೋಧಿಸಿದೆ. ಬಿಜೆಪಿಯ ಕೇಂದ್ರ ಸರಕಾರ ಹಾಗೂ ಮುಸ್ಲಿಂ ಮಂಡಳಿಯ ಪರ ಹಾಗೂ ವಿರೋಧದ ನಿಲುವಿಗೆ ಧಾರ್ಮಿಕ ಹಾಗೂ ರಾಜಕೀಯ ಹಿತಾಸಕ್ತಿಗಳಿವೆ. ಆದರೆ ಈ ಹಿತಾಸಕ್ತಿಗಳನ್ನೂ ಮೀರಿ ಮಹಿಳೆಯರ ಸ್ವಾತಂತ್ರ್ಯವನ್ನು ಎತ್ತಿಹಿಡಿದು ಲಿಂಗಸಮಾನತೆಯನ್ನು ಕಾಪಾಡುವ ನಿಟ್ಟಿನಲ್ಲಿ ಮುಸ್ಲಿಂ ವೈವಾಹಿಕ ವೈಯಕ್ತಿಕ ಸಂಹಿತೆಗಳನ್ನು ಸಾಂವಿಧಾನಿಕ ಕಾನೂನು ವ್ಯಾಪ್ತಿಗೆ ತರಬೇಕಿದೆ. ಇದಕ್ಕಾಗಿ ಮುಸ್ಲಿಂ ಮಹಿಳಾ ಸಂಘಟನೆಗಳು ಒತ್ತಾಯಿಸುತ್ತಿವೆ.
ಈ ಏಕರೂಪ ನಾಗರಿಕ ಸಂಹಿತೆ ಬೇಕು ಎಂಬ ಬೇಡಿಕೆ ಧಾರ್ಮಿಕ ಕಾರಣಗಳಿಗಾಗಿ ಸಂಘಪರಿವಾರ ಮುನ್ನಲೆಗೆ ತಂದಿದ್ದರೂ ಇದರ ಅಗತ್ಯತೆ ಕುರಿತು ಮೊದಲು ದ್ವನಿ ಎತ್ತಿದ್ದು ಸ್ತ್ರೀವಾದಿಗಳೇ ಆಗಿದ್ದಾರೆ. ಎರಡೂ ಧರ್ಮದೊಳಗಿನ ಮತಾಂಧರಿಗೆ ಮಹಿಳೆಯರ ಸ್ವಾತಂತ್ರ್ಯದ ಬಗ್ಗೆ ಕಾಳಜಿಗಿಂತ ತಮ್ಮ ಧರ್ಮದ ಹಿತಾಸಕ್ತಿಗಳೇ ಪ್ರಮುಖವಾಗಿವೆ. ಹಿಂದುತ್ವವಾದಿಗಳಿಗೆ ಮುಸ್ಲಿಂ ಬಹುಪತ್ನಿತ್ವ ವ್ಯವಸ್ಥೆ ಇಲ್ಲವಾಗಿಸಿ ಏರುತ್ತಿರುವ ಮುಸ್ಲಿಂ ಜನಸಂಖ್ಯೆ ನಿಯಂತ್ರಿಸುವ ಹುನ್ನಾರ. ಮುಸ್ಲಿಂ ಮೂಲಭೂತವಾದಿಗಳಿಗೆ ಎಲ್ಲಿ ಧಾರ್ಮಿಕ ಶರಿಯತ್ ಕಾನೂನಿನ ಹಿಡಿತ ತಪ್ಪಿಹೋದರೆ ಮಹಿಳೆಯರು ತಮ್ಮ ನಿಯಂತ್ರಣ ತಪ್ಪಿ ಹೋಗುತ್ತಾರೋ ಎನ್ನುವ ಅವ್ಯಕ್ತ ಭಯ. ಈ ಎರಡೂ ಧರ್ಮೀಯ ಮೂಲಭೂತವಾದಿಗಳ ತಂತ್ರ ಪ್ರತಿತಂತ್ರಕ್ಕೆ ಮಹಿಳೆ ಬಲಿಯಾಗುತ್ತಿದ್ದಾಳೆ. ಈಗ ಎಚ್ಚೆತ್ತ ಇಸ್ಲಾಂ ಧರ್ಮೀಯ ಮಹಿಳೆಯರೂ ಸಂಘಟಿತರಾಗಿ ತ್ರಿವಳಿ ತಲಾಕ್ ಮತ್ತು ಬಹುಪತ್ನಿತ್ವದ ವಿಚಾರವಾಗಿ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ವಿರುದ್ದ ತಿರುಗಿ ಬಿದ್ದಿದ್ದಾರೆ. "ಈ ಮಂಡಳಿಯು ಪುರುಷರ ದಬ್ಬಾಳಿಕೆಯನ್ನು ಪೋಷಣೆ ಮಾಡುತ್ತಿದೆ ಹಾಗೂ ತಮ್ಮ ಅನುಕೂಲಕ್ಕೆ ತಕ್ಕಂತೆ ಶರಿಯತ್ ಕಾನೂನನ್ನು ತಿರುಚುತ್ತಿದೆ" ಎಂದು ಮುಸ್ಲಿಂ ಮಹಿಳಾ ಪೌಂಡೇಷನ್ನಿನ ಅಧ್ಯಕ್ಷೆ ನಾಜ್ನೀಮ್ ಅನ್ಸಾರಿ ಆರೋಪಿಸುತ್ತಿದ್ದಾರೆ.
"ಮುಸ್ಲಿಂ ಮಹಿಳೆಯರ ಹಕ್ಕು ಮತ್ತು ಸ್ವಾತಂತ್ರ್ಯದ ವಾದ ಬಂದಾಗ ಈ ಮುಸ್ಲಿಂ ಮಂಡಳಿಗೆ ಶರಿಯತ್ ಕಾನೂನು ಉಳಿಸಿಕೊಳ್ಳುವ ತವಕ ಬರುತ್ತದೆ. ಆದರೆ ಮಹಿಳೆಯರ ಮೇಲೆ ಪುರುಷರಿಂದ ಅತ್ಯಾಚಾರ, ಹಲ್ಲೆ ಹಾಗೂ ಶೋಷಣೆಯಾದಾಗ ಪುರುಷರ ವಿರುದ್ಧ ಈ ಶರಿಯತ್ ಕಾನೂನನ್ನು ಯಾಕೆ ಅನ್ವಯಿಸುವುದಿಲ್ಲ" ಎಂದು ಹಲವಾರು ಮಹಿಳಾ ಸಂಘಟನೆಗಳು ಆಗ್ರಹಿಸುತ್ತಿವೆ. ಹಾಗೂ ಅವರ ಒತ್ತಾಸೆಯಲ್ಲಿ ನ್ಯಾಯಬದ್ದವಾದ ತರ್ಕವೂ ಇದೆ.
ಏಕರೂಪ ನಾಗರಿಕ ಸಂಹಿತೆ ಜಾರಿಯ ಪೂರ್ವಬಾವಿಯಾಗಿ ಕಾನೂನು ಆಯೋಗವು ಸಾರ್ವಜನಿಕ ಅಭಿಪ್ರಾಯವನ್ನು ಪಡೆಯಲು ಪ್ರಶ್ನಾವಳಿಗಳ ಫಾರಂ ಬಿಡುಗಡೆ ಮಾಡಿದೆ. ಕಾನೂನು ಆಯೋಗದ ಈ ಕ್ರಮವನ್ನು ವಿರೋಧಿಸಿದ ಮುಸ್ಲಿಂ ಮಂಡಳಿಯ ನಿಲುವನ್ನೇ ಸಾರಾಸಗಟಾಗಿ ಖಂಡಿಸಿದ ಮುಸ್ಲಿಂ ಮಹಿಳಾ ಸಂಘಟನೆಗಳು ಲಕ್ಷಾಂತರ ಫಾರಂಗಳನ್ನು ತುಂಬಿ ಕಳಿಸುವ ಮೂಲಕ ಏಕಮುಖಿಯಾದ ಶರಿಯತ್ ಕಾನೂನಿನ ಬದಲಾವಣೆಗೆ ಆಂದೋಲನವನ್ನೇ ಶುರುಮಾಡಿದ್ದಾರೆ. " ಮುಸ್ಲಿಂ ಮಹಿಳೆಯರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಕುರಿತ ವಿಷಯದಲ್ಲಿ ರಾಜಕೀಯ ತರುವ ಅಗತ್ಯವಿಲ್ಲ, ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸ್ವಂತ ಲಾಭಕ್ಕಾಗಿ ಮಹಿಳಾಪರ ವಿಷಯಕ್ಕೆ ಕೋಮು ಬಣ್ಣ ಬೆರೆಸುತ್ತಿದೆ. ಅಲ್ಪಸಂಖ್ಯಾತರಲ್ಲಿ ಅಲ್ಪಸಂಖ್ಯಾತರಾಗಿರುವ ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ಕಸಿಯುವ ಹುನ್ನಾರ ಮಾಡಲಾಗುತ್ತಿದೆ" ಎಂದು ಭಾರತೀಯ ಮುಸ್ಲಿಂ ಆಂದೋಲನದ ಉಪಾಧ್ಯಕ್ಷೆ ನೂರ್ ಜಹಾನ್ ಸಫಿಯಾ ನಿಯಾಜ್ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ನಿಜಕ್ಕೂ ಈಗ ಅಗಬೇಕಾದದ್ದು ಇದೆ. ಹೊರಗಿನ ಶಕ್ತಿಗಳ ರಾಜಕೀಯ ಹಿತಾಸಕ್ತಿಯ ಒತ್ತಡಕ್ಕಿಂತಲೂ ಮುಸ್ಲಿಂ ಸಮುದಾಯದೊಳಗಿನ ಶೋಷಿತ ಮಹಿಳೆಯರು ತಮ್ಮ ವಿಮೋಚನೆಗಾಗಿ ತರುವ ಆಂತರಿಕ ಒತ್ತಡ ಹೆಚ್ಚು ಪರಿಣಾಮಕಾರಿಯಾಗಿರುವಂತಹದು. ಸಂಹಿತೆ ಏಕರೂಪವೋ ಇಲ್ಲಾ ಇನ್ಯಾವ ರೂಪವೋ ಅನ್ನುವುದು ಇಲ್ಲಿ ಮುಖ್ಯವಲ್ಲ. ಮಹಿಳೆಯರಿಗೆ ಸಮಾನತೆಯಿಂದ ಬದುಕುವ ಹಕ್ಕು ಹಾಗೂ ಪುರುಷರ ದೌರ್ಜನ್ಯದ ವಿರುದ್ದವಾಗಿ ಕಾನೂನಿನ ರಕ್ಷಣೆ ಬೇಕಾಗಿದೆ. ಇದನ್ನು ದೊರಕಿಸಿಕೊಡಲು ಶರಿಯತ್ ಕಾನೂನು ಪಾಲಕರಿಗಾಗಲಿ ಇಲ್ಲವೇ ಇಸ್ಲಾಂ ವೈಯಕ್ತಿಕ ಕಾನೂನು ಮಂಡಳಿಗಾಗಲಿ ಸಾಧ್ಯವಾಗಿಲ್ಲ.... ಆಗುವುದೂ ಇಲ್ಲ. ಧಾರ್ಮಿಕ ಕಟ್ಟಳೆಗಳ ಸೂಕ್ತ ಬದಲಾವಣೆಗಳ ಮೂಲಕ ಲಿಂಗಸಮಾನತೆ ಜಾರಿಗೆ ತಂದಿದ್ದರೆ... ದಬ್ಬಾಳಿಕೆಗೊಳಗಾದ ಮುಸ್ಲಿಂ ಮಹಿಳೆಯರಿಗೆ ರಕ್ಷಣೆ ಕೊಟ್ಟಿದ್ದರೆ ಇಂದು ಇಸ್ಲಾಂ ಮಹಿಳೆಯರು ಏಕರೂಪದ ನಾಗರೀಕ ಸಂಹಿತೆಗಾಗಿ ಆಗ್ರಹಿಸುವ ಅಗತ್ಯವೇ ಬರುತ್ತಿರಲಿಲ್ಲ.
ಹಿಂದೂ ಹಾಗೂ ಮುಸ್ಲಿಂ ಮೂಲಭೂತವಾದಿಗಳ ಈ ಮತಾಂಧತೆಯ ಮೇಲಾಟದಲ್ಲಿ ಶತಮಾನಗಳಿಂದ ಪುರುಷರ ದೌರ್ಜನ್ಯದಲಿ ನೊಂದ ಇಸ್ಲಾಮಿನ ಮಹಿಳೆಯರಿಗೆ ಲಿಂಗಸಮಾನತೆ ಹಾಗೂ ರಕ್ಷಣೆ ಸಿಗುವುದಾದರೆ ಸಿಗಲಿ. ಈ ಹಿಂದೆ ಭಾರತದ ವಿರೋಧಿಗಳಾದ ಬ್ರಿಟೀಷರನ್ನು ದಲಿತ ಸಮುದಾಯ ಬೆಂಬಲಿಸಿತ್ತು. ಯಾಕೆಂದರೆ ಮನುವಾದಿಗಳ ದಬ್ಬಾಳಿಕೆಯ ವಿರುದ್ದ ದಲಿತ ವರ್ಗಕ್ಕೆ ಬ್ರಿಟೀಷರು ಕಾನೂನಿನ ರಕ್ಷಣೆ ಕೊಟ್ಟಿದ್ದರು. ಅಕ್ಷರ ವಂಚಿತ ಜನಕ್ಕೆ ವಿದ್ಯೆಯನ್ನು ವದಗಿಸಲು ಅನುಕೂಲಮಾಡಿಕೊಟ್ಟಿದ್ದರು. ಅಂಬೇಡ್ಕರರ ದಲಿತರ ಪರವಾದ ಆಶಯಕ್ಕೆ ಬ್ರಿಟೀಷರು ಸಹಕರಿಸಿದರು. ಹೀಗಾಗಿ ದಲಿತ ವರ್ಗ ಈಗಲೂ ಸಹ ಬ್ರಿಟೀಷರಿಗೆ ಆಭಾರಿಯಾಗಿದೆ. ಇಲ್ಲವಾದಲ್ಲಿ ಈಗಲೂ ನಮ್ಮ ದೇಶದ ದಲಿತರು ಸವರ್ಣೀಯರ ಗುಲಾಮಗಿರಿಯಲ್ಲೇ ಇರಬೇಕಾಗುತ್ತಿತ್ತು. ಮಹಿಳೆಯರು ಲಿಂಗತಾರತಮ್ಯಕ್ಕೊಳಗಾಗಿ ಪುರುಷರ ಅಡಿಯಾಳಾಗೇ ಬದುಕಬೇಕಾಗಿತ್ತು. ಅದೇ ರೀತಿ ಈಗಲೂ ಈ ಮನುವಾದಿಗಳ ಇಸ್ಲಾಂ ದ್ವೇಷದಿಂದಾಗಿ ಮುಸ್ಲಿಂ ಮಹಿಳೆಯರಿಗೆ ಕಾನೂನು ಬದ್ದ ರಕ್ಷಣೆ ಸಿಗುವುದಾದರೆ ಏಕರೂಪದ ನಾಗರೀಕ ಸಂಹಿತೆ ಜಾರಿಗೆ ಬರಲಿ. ಇಲ್ಲವಾದರೆ ಇಸ್ಲಾಂ ಮೂಲಭೂತವಾದಿಗಳು ಹಾಗೂ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯವರು ಲಿಂಗತಾರತಮ್ಯವನ್ನು ಹೋಗಲಾಡಿಸಿ ಶರಿಯತ್ ಕಾನೂನುಗಳನ್ನೇ ಬಿಗಿಗೊಳಿಸಿ ಮಹಿಳೆಯರ ಮೇಲೆ ದಬ್ಬಾಳಿಕೆ ಮಾಡುವ ಹಾಗೂ ಶರಿಯತ್ ಕಾನೂನುಗಳನ್ನು ಉಲ್ಲಂಘನೆ ಮಾಡುವ ಪುರುಷರನ್ನು ಶಿಕ್ಷಿಸಲಿ. ಇಸ್ಲಾಂ ವೈಯಕ್ತಿಕ ಕಾನೂನೂಗಳಲ್ಲಿ ಸೂಕ್ತ ಬದಲಾವಣೆ ತಂದು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ದುಷ್ಪರಿಣಾಮ ಬೀರುವಂತಹ ಬಹುಪತ್ನಿತ್ವ ವ್ಯವಸ್ಥೆಯನ್ನು ರದ್ದುಗೊಳಿಸಲಿ. ಹಾಗೂ ಮಹಿಳೆಯರಿಗೆ ಮಾರಕವಾಗಿರುವ ತ್ರಿವಳಿ ತಲಾಕ್ ಕಾನೂನನ್ನು ಮೂಲ ಶರಿಯತ್ತಿನಲ್ಲಿರುವಂತೆ ಕಟ್ಟುನಿಟ್ಟಾಗಿ ಲಿಂಗಪಕ್ಷಪಾತ ಇಲ್ಲದಂತೆ ಜಾರಿಗೊಳಿಸಲಿ.
ಈ ಪುರುಷಪ್ರಧಾನ ಧಾರ್ಮಿಕ ಮೂಲಭೂತವಾದಿಗಳು ಒಂದು ಸತ್ಯವನ್ನು ಮನಗಾನಬೇಕಿದೆ. ಯಾವುದೇ ಕರ್ಮಠ ವ್ಯವಸ್ಥೆಯ ವಿನಾಶದ ಬೀಜಗಳು ಆ ವ್ಯವಸ್ಥೆಯೊಳಗಿಂದಲೇ ಹುಟ್ಟುತ್ತವೆ. ಈಗ ಶೋಷಿತರಾದ ಇಸ್ಲಾಂ ಮಹಿಳೆಯರು ಲಿಂಗತಾರತಮ್ಯತೆಯ ವಿರುದ್ಧ ಹಾಗೂ ಪುರುಷ ದಬ್ಬಾಳಿಕೆಯ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅವರಿಗೆ ಸಮಾನತೆಯನ್ನು ಸಾರುವ ಭಾರತದ ಸಂವಿಧಾನವೂ ಬೆಂಬಲಕ್ಕಿದೆ. ಇಸ್ಲಾಮಿನ ಮಹಿಳೆಯರೇ ಬಯಸಿದಾಗ ಸುಪ್ರಿಂ ಕೋರ್ಟ್ ಸಹ ಏಕರೂಪ ಸಂಹಿತೆಯನ್ನು ವಿರೋಧಿಸಲಾರದು. ಬದಲಾದ ಕಾಲಕ್ಕೆ ತಕ್ಕಂತೆ, ಜನಾಂಗದ ನ್ಯಾಯಯುತವಾದ ಬೇಡಿಕೆಗೆ ಪೂರಕವಾಗಿ ಶರಿಯತ್ ಕಾನೂನುಗಳಲ್ಲಿ ಲಿಂಗಸಮಾನತೆಗೆ ಪೂರಕವಾಗಿ ಬದಲಾವಣೆ ತರುವುದು ಈ ಕಾಲಘಟ್ಟದ ಅಗತ್ಯವಾಗಿದೆ. ದಮನಿತ ಮಹಿಳೆಯರ ರಕ್ಷಣೆಗೆ ಯಾವ ದೇವರೂ ಬರದೇ ಇರುವ ಸಂದರ್ಭದಲ್ಲಿ ಬೇರೆ ಯಾವ ಮತಾಂಧ ರಕ್ಕಸ ಬಂದು ನೆರವಾದರೂ ಅದು ಬೇಕಾಗಿದೆ. ಒಟ್ಟಿನ ಮೇಲೆ ಎಲ್ಲಾ ಧರ್ಮದ ಮಹಿಳೆಯರು ತಾರತಮ್ಯವಿಲ್ಲದ ಘನತೆಯ ಸ್ವಾಭಿಮಾನಿ ಬದುಕು ಬಾಳಬೇಕಿದೆ.
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ