ತಹ ತಹ ...6
"ಸಂಶೋಧನೆಯೆನ್ನುವುದು ಕೇವಲ ಇತಿಹಾಸದ ಶೋಧವಲ್ಲ. ಸುಳ್ಳು ಇತಿಹಾಸವನ್ನು ಮುಂದುಮಾಡಿಕೊಂಡು ವರ್ತಮಾನವನ್ನು ದುರುಪಯೋಗ ಮಾಡಿಕೊಳ್ಳುವವರೊಂದಿಗೆ ನಡೆಸುವ ಹೋರಾಟ" ಎಂದು ಹೇಳಿದ ಡಾ.ಎಂ.ಎಂ.ಕಲಬುರ್ಗಿಯವರ ಹತ್ಯೆಯಾಗಿ ಆಗಸ್ಟ್ 30 ಕ್ಕೆ ಸರಿಯಾಗಿ ಒಂದು ವರ್ಷ ಕಳೆಯಿತು.
ಬಹುತೇಕ ಸಾಹಿತಿ ಸಂಶೋಧಕರ ಹಾಗೆ ಸುಳ್ಳು ಪುರಾಣೇತಿಹಾಸವನ್ನೇ ನಂಬುತ್ತಾ ನಂಬಿಸುತ್ತಾ ಹೋಗಿದ್ದರೆ ಕಲಬುರ್ಗಿಯವರು ಈಗಲೂ ಜೀವ ಉಳಿಸಿಕೊಂಡಿರುತ್ತಿದ್ದರು. ಹಿಂಗೆಲ್ಲಾ ಇದ್ದದ್ದನ್ನು ಇದ್ದ ಹಾಗೆ ಹೇಳಿದವರನ್ನ ನಮ್ಮ ಮತಾಂಧ ಮಹಾಷಯರು ಯಾವತ್ತಾದರೂ ನೆಮ್ಮದಿಯಿಂದ ಬದುಕಲು ಬಿಟ್ಟಿದ್ದು ಮನುಕುಲದ ಇತಿಹಾಸದಲ್ಲೇ ಇಲ್ಲವಲ್ಲ.
ಬುದ್ದ ಪುರೋಹಿತಶಾಹಿಯ ದಬ್ಬಾಳಿಕೆಯನ್ನು ವಿರೋಧಿಸಿದ. ಅಂತಾ ಬುದ್ದನನ್ನೇ ವಿಷವಿಕ್ಕಿ ಕೊಂದ ಸನಾತನಿಗಳು ತದನಂತರ ಬುದ್ದ ಧಮ್ಮವನ್ನೇ ದೇಶಾಂತರಗೊಳಿಸಿ ನಿಟ್ಟುಸಿರಿಟ್ಟರು. ಬಸವಣ್ಣ ಪುರೋಹಿತಶಾಹಿ ಅಸಮಾನತೆಯ ವಿರುದ್ದ ದ್ವನಿಯೆತ್ತಿ ಸಾಮಾಜಿಕ ಸಮಾನತೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಿದ. ಜಾತಿ ವ್ಯವಸ್ಥೆಯನ್ನೇ ನಾಶ ಮಾಡಲು ಎಲ್ಲಾ ಜಾತಿಯ ದುಡಿಯುವ ವರ್ಗದವರನ್ನು ಒಂದೇ ಧರ್ಮದಡಿ ತಂದು ಮೇಲು ಕೀಳಿಲ್ಲವೆಂದು ಸಾಧಿಸಿದ. ಆದರೆ ಸನಾತನ ವರ್ಣವ್ಯವಸ್ಥೆಗೆ ಧಕ್ಕೆಯಾಗುವುದನ್ನು ಪುರೊಹಿತಶಾಹಿ ಸಂತಾನ ಅದು ಹೇಗೆ ಸಹಿಸಿಕೊಂಡು ಸುಮ್ಮನಿರಲು ಸಾಧ್ಯ. ಕುತಂತ್ರಗಳನ್ನು ಮಾಡಿ ಬಸವಣ್ಣ ಆತ್ಮಹತ್ಯೆ ಮಾಡಿಕೊಳ್ಳುವಂತಹ ಸಂದರ್ಭ ಸೃಷ್ಟಿಸಿ ಶರಣ ಸಂಕುಲವನ್ನೇ ಸರ್ವನಾಶ ಮಾಡಿ ಸನಾತನ ಧರ್ಮವನ್ನು ಉಳಿಸಿಕೊಂಡರು. ತಮ್ಮ ಹಿಂದುತ್ವದ ಆಶಯಕ್ಕೆ ಅಡೆತಡೆಗಳನ್ನು ಒಡ್ಡುತ್ತಿದ್ದ ಮಹಾತ್ಮಾ ಗಾಂಧಿಯನ್ನು ಕೊಂದ ಮತಾಂಧ ಪಡೆ ಗಾಂಧೀವಾದವನ್ನೇ ಮೂಲೆಗುಂಪುಮಾಡಿ ಮೂಲಭೂತವಾದದ ರಕ್ಷಣೆಗೆ ತಮ್ಮ ರಾಜಕೀಯ ಶಕ್ತಿಯನ್ನು ಹೆಚ್ಚಿಸಿಕೊಂಡರು.
ಹೀಗೆ ಮನುವಾದಿಗಳ ಮತಾಂಧತೆಗೆ ಬಲಿಯಾದವರ ಸಂಖ್ಯೆ ಅಗಣಿತವಾಗಿದೆ. ಮಹಾರಾಷ್ಟ್ರದ ವಿಚಾರವಾದಿಗಳಾದ ದಾಬೋಲ್ಕರ್, ಪನ್ಸಾರೆಯವರ ಹತ್ಯೆಯ ಹಿಂದೆ ಇದೇ ಸನಾತನಿಗಳ ಕೊಲೆಪಾತಕತನದ ಕೈವಾಡವಿದೆ. ಇನ್ನು 'ಇತಿಹಾಸದ ಸುಳ್ಳುಗಳನ್ನು, ಕಟ್ಟುಕತೆಗಳನ್ನು ಸಂಶೋಧನೆಗಳ ಮೂಲಕ ಅನಾವರಣಗೊಳಿಸಿ ತಿಳಿಸಿದ ಕಲಬುರ್ಗಿಯವರಂತಾ ಸಂಶೋಧಕರನ್ನು ಸುಮ್ಮನೇ ಜೀವಸಹಿತ ಇರಲು ಬಿಡಲು ಸಾಧ್ಯವೆ? ವರ್ಷದ ಹಿಂದೆ ಮುಖಮುಚ್ಚಿಕೊಂಡು ಬಂದ ಮತಾಂಧರು ಸತ್ಯ ಹೇಳುವ ಬಾಯೊಂದನ್ನು ಖಾಯಂ ಆಗಿ ಮೌನವಾಗಿಸಿದರು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹಾಡುಹಗಲೇ ಹತ್ಯೆ ಮಾಡಿದರು. ಯಾರಾದರೂ ಹಿಂದೂ ಧರ್ಮ ದೇವರುಗಳ ವಿರುದ್ಧ ಉಸಿರೆತ್ತಿದರೆ ಕಲಬುರ್ಗಿಯವರಿಗಾದ ಗತಿಯೇ ಗ್ಯಾರಂಟಿ ಎನ್ನುವ ಎಚ್ಚರಿಕೆಯನ್ನು ಹಂತಕ ಪಡೆ ಕೊಟ್ಟಿದ್ದಂತೂ ನಿಜ
.ಆದರೇನು ಮಾಡೋದು ಸನಾತನಿಗಳು ಒಂದು ಬಗೆದರೆ ಸಮಾಜ ಇನ್ನೊಂದು ಬಗೆಯುತ್ತದೆ. ಮನುಸ್ಮೃತಿಯಾಧರಿತ ಪರಮ ಪವಿತ್ರ ಹಿಂದುತ್ವ ರಾಷ್ಟ್ರ ನಿರ್ಮಾಣದ ಕನಸು ಅದೆಷ್ಟೋ ಶತಮಾನಗಳಿಂದ ನನಸಾಗುತ್ತಲೇ ಇಲ್ಲ. ಸನಾತನಿಗಳ ಸಂತಾನ ತಮ್ಮ ಮಹೋನ್ನತ ಪ್ರಯತ್ನ ಕೈಬಿಡುತ್ತಿಲ್ಲ. ಬೌದ್ದ ದಮ್ಮದ ಮೇಲೆ ದಬ್ಬಾಳಿಕೆ ಮಾಡಿ ಗಡಿಪಾರು ಮಾಡಿ ತಾತ್ಕಾಲಿಕ ಯಶಸ್ವಿಯಾದರಾದರೂ ಬುದ್ದ ದಲಿತರ ದಮನಿತರ ಎದೆಯ ನಾಡಿಮಿಡಿತವಾಗಿಬಿಟ್ಟ. ಬಸವಣ್ಣನವರ ಸಹಿತ ಶರಣಕುಲವನ್ನೇ ನಾಶಮಾಡಲು ಅಹೋರಾತ್ರಿ ಪ್ರಯತ್ನಿಸಿದ ಪುರೋಹಿತಶಾಹಿಗಳು ಆ ಕಾಲಕ್ಕೆ ಸಫಲರಾದರಾದರೂ ಕಾಲಕ್ರಮೇಣ ಬಸವ ಧರ್ಮ ಬಹುದೊಡ್ಡ ಶಕ್ತಿಯಾಗಿ ಬೆಳೆದು ನೆಲೆ ನಿಂತು ವೈದಿಕಶಾಹಿಗೆ ಸವಾಲೊಡ್ಡುತ್ತಿದೆ. ಗಾಂಧಿಯನ್ನು ಕೊಂದರೂ ಗಾಂಧಿ ಈಗಲೂ ಭಾರತೀಯರ ಸ್ಮೃತಿಪಟಲದ ಭಾಗವಾಗಿದ್ದಾರೆ. ಅಂಬೇಡ್ಕರರಿಗೆ ಇನ್ನಿಲ್ಲದಷ್ಟು ತೊಂದರೆ ಕೊಟ್ಟರೂ ಅಂಬೇಡ್ಕರ್ ದಲಿತ ವರ್ಗದ ದ್ವನಿಯಾಗಿ ಎದ್ದು ನಿಂತಿದ್ದಾರೆ. ಈಗ ಕಲಬುರ್ಗಿಯವರನ್ನು ಹತ್ಯೆ ಮಾಡಿದರೂ ಅವರ ಸಾವು ಜನರಲ್ಲಿ ಸನಾತನಿಗಳ ವಿರುದ್ದ ಜಾಗೃತಿ ಮೂಡಿಸುತ್ತಿದೆ
.ಅದ್ಯಾಕೊ ನಮ್ಮ ವೈದಿಕ ಶಾಹಿಯ ನಸೀಬೇ ಸರಿಯಿಲ್ಲ. ಶತಮಾನಗಳಿಂದ ತಮ್ಮ ವರ್ಣಾಶ್ರಮವಾಧರಿತ ಪ್ರಭುತ್ವ ಸ್ಥಾಪಿಸಿ ಮನುಸ್ಮೃತಿಯನ್ನು ಸಂವಿಧಾನವನ್ನಾಗಿಸಿ ಬಹುಸಂಖ್ಯಾತ ದುಡಿಯುವ ಜನತೆಯನ್ನು ಹಾಗೂ ಮಹಿಳೆಯರನ್ನು ಗುಲಾಮರನ್ನಾಗಿಸಿ ಅಖಂಡ ಹಿಂದೂ ರಾಷ್ಟ್ರ ಕಟ್ಟಬೇಕೆಂದು ಶತಾಯ ಗತಾಯ ಪ್ರಯತ್ನಿಸುತ್ತಲೇ ಇದ್ದಾರೆ. ಹಲವಾರು ಪ್ರಜ್ಞಾವಂತರು ಕಾಲಕಾಲಕ್ಕೆ ಸನಾತನಿಗಳ ಹುನ್ನಾರವನ್ನು ಬಯಲುಗೊಳಿಸುತ್ತಾ ಜನಸಂಘಟನೆಗಳ ಮೂಲಕ ಪ್ರತಿರೋಧವನ್ನೊಡ್ಡುತ್ತಲೇ ಬಂದಿದ್ದಾರೆ. ಗೋಮಾತೆ.. ಹಿಂದುತ್ವ, ದೇಶಭಕ್ತಿ, ಧರ್ಮ, ದೇವರು... ಹೀಗೆ ಬಗೆಬಗೆಯ ರೀತಿಯಲ್ಲಿ ಸಾಮೂಹಿಕ ಮೇನಿಯಾವನ್ನು ಹುಟ್ಟಿಸಿ ವೈದಿಕಶಾಹಿ ಪ್ರಣೀತ ಹಿಂದೂರಾಷ್ಟ್ರ ಸ್ಥಾಪನೆಗೆ ಸಂಘ ಪರಿವಾರ ಸತತವಾಗಿ ಪ್ರಯತ್ನಿಸುತ್ತಲೇ ಇದೆ. ವಿರೋಧಿಸಿದವರ ಮೇಲೆ ಸುಳ್ಳು ಕೇಸುಗಳನ್ನು ಹಾಕುವುದು, ಗಲಭೆಗಳನ್ನು ಸೃಷ್ಟಿಸುವುದು, ಹಲ್ಲೆಗಳನ್ನು ಮಾಡಿಸುವುದು ಕೊನೆಗೆ ಪ್ರಾಣ ಹತ್ಯೆಗಳನ್ನೂ ಮಾಡಿಸಿ ಹಿಂದುತ್ವದ ವಿರೋಧಿಗಳನ್ನು ದಮನಿಸುವುದೇ ಈ ಮತಾಂಧ ಶಕ್ತಿಗಳ ಶತಮಾನದ ಶಡ್ಯಂತ್ರಗಳಾಗಿವೆ.
ಆದರೆ ಏನು ಮಾಡೋದು ಅಸಂಖ್ಯಾತ ದಲಿತ ದಮನಿತ ಜನತೆ ಇವರ ವಿರುದ್ಧ ಕಾಲಕಾಲಕ್ಕೆ ತಿರುಗಿ ಬೀಳುತ್ತಲೇ ಇದ್ದಾರೆ. ಮತಾಂಧ ಶಕ್ತಿಗಳು ಪ್ರಯೋಗಿಸುವ ಅಸ್ತ್ರಗಳೆಲ್ಲಾ ತಾತ್ಕಾಲಿಕ ಯಶಸ್ಸನ್ನು ತಂದುಕೊಟ್ಟರೂ ದೀರ್ಘಾವಧಿಯಲ್ಲಿ ಸನಾತನಿಗಳ ವಿರುದ್ದವೇ ತಿರುಗಿ ಬಿದ್ದಿರುವುದನ್ನು ಚರಿತ್ರೆ ಸಾರುತ್ತದೆ. ಕಲಬುರ್ಗಿಯವರ ದ್ವನಿ ಅಡಗಿಸಿ ಸತ್ಯದ ಬಾಯಿಮುಚ್ಚಿಸುವ ಪ್ರಯತ್ನವನ್ನು ಮಾಡಲಾಯಿತಾದರೂ ಈಗ ಅದು ಜನಾಕ್ರೋಶಕ್ಕೆ ಕಾರಣವಾಗಿದೆ. ಕಲಬುರ್ಗಿಯವರು ಪ್ರತಿನಿಧಿಸುತ್ತಿದ್ದ ಲಿಂಗಾಯತ ಸಮುದಾಯವೂ ತಿರುಗಿ ಬಿದ್ದಿದೆ. ಕೊಲೆಗಾರರನ್ನು ಕಂಡುಹಿಡಿದು ಬಂಧಿಸಿ ಶಿಕ್ಷಿಸಬೇಕೆಂದು ಇವತ್ತು (ಆಗಸ್ಟ್ 30) ಧಾರವಾಡದಲ್ಲಿ ಬ್ರಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿದೆ. ಒಂದು ದ್ವನಿ ಅಡಗಿಸಿದರೆ ಸಾವಿರಾರು ದ್ವನಿಗಳು ನ್ಯಾಯಕ್ಕಾಗಿ ಆಗ್ರಹಿಸುತ್ತವೆ ಎಂಬುದು ಸಾಬೀತಾಗಿದೆ. ಕೊಲೆಮಾಡಿದವರು ಹಾಗೂ ಮಾಡಿಸಿದವರು ಹೇಡಿಗಳಂತೆ ಅಡಗಿಕೊಂಡಿದ್ದರೂ, ಕಾನೂನಿನಿಂದ ತಪ್ಪಿಸಿಕೊಂಡರೂ ಯಾರ ಕೈವಾಡದಿಂದ ಹತ್ಯೆಯಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ.
ಇಂತಹ ಪ್ರತಿರೋಧಗಳಿಂದ ಪಾಠ ಕಲಿಯದ ಸನಾತನಿಗಳು ತಮ್ಮ ಗುರಿ ಮುಟ್ಟಲು ಸತತವಾಗಿ ವಿದ್ವಂಸಕಾರಿ ಪ್ರಯೋಗಗಳನ್ನು ದೇಶಾದ್ಯಂತ ಮಾಡುತ್ತಲೇ ಇದ್ದಾರೆ... ಮಾಡುತ್ತಲೇ ಇರುತ್ತಾರೆ. ಅವರ ತಂತ್ರಗಳಿಗೆ ಪ್ರಜ್ಞಾವಂತ ಜನತೆ ಪ್ರತಿರೋಧವನ್ನು ಒಡ್ಡುತ್ತಲೇ ಬಂದಿದ್ದಾರೆ... ಒಡ್ಡುತ್ತಲೇ ಇರುತ್ತಾರೆ. ಇದು ಸಾರ್ವಕಾಲಿಕ ಕದನ. ಮನುವಾದ ಹಾಗೂ ಮಾನವತಾದದ ನಡುವಿನ ನಿರಂತರ ಸಂಘರ್ಷ. ಕೊನೆಮೊದಲೆಂಬುದಿಲ್ಲ.. ಅಂತ್ಯಕಾಣುವವರೆಗೂ ಮನುಕುಲಕೆ ನೆಮ್ಮದಿ ಎಂಬುದಿಲ್ಲ.
- ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ