ತಹ ತಹ....21
ಅಕ್ಕನ ಕುರಿತ ನಾಟಕವದು, ಬೆಕ್ಕಸ ಬೆರಗಾಗಿ ನೋಡಿದೆ. ಸೆಪ್ಟಂಬರ್ 10 ರಂದು ತರಳಬಾಳು ಕೇಂದ್ರದಲ್ಲಿ ಸಾಣೇಹಳ್ಳಿಯ ಶ್ರೀ ಶಿವಕುಮಾರ ಕಲಾಸಂಘದ ಕಲಾವಿದರು ಮಾಲತೇಶ ಬಡಿಗೇರರ ನಿರ್ದೇಶನದಲ್ಲಿ ಶರಣ ಸತಿ- ಲಿಂಗ ಪತಿ' ನಾಟಕವನ್ನು ಪ್ರದರ್ಶಿಸಿದರು. ಶಿವಶರಣೆ ಅಕ್ಕ ಮಹಾದೇವಿಯ ಬದುಕು ಹಾಗೂ ವಚನಗಳನ್ನು ಆಧರಿಸಿ ದಿ. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಗಳು ರಚಿಸಿದ್ದ ನಾಟಕವಿದು..
ಬಾಲಕಿ ಮಹಾದೇವಿಗೆ ಮರುಳಸಿದ್ದರು ಲಿಂಗದೀಕ್ಷೆ ಕೊಟ್ಟಿದ್ದು, ಆಕೆ ಚೆನ್ನಮಲ್ಲಿಕಾರ್ಜುನನೇ ತನ್ನ ಪತಿ ಎಂದು ಆರಾಧಿಸಿದ್ದು, ಕೌಶಿಕ ಮಹಾರಾಜ ಮಹಾದೇವಿಯ ಸೌಂದರ್ಯಕ್ಕೆ ಮರುಳಾಗಿ ಮದುವೆಯಾಗ ಬಯಸಿದ್ದು, ತನ್ನಿಚ್ಚೆಗೆ ವಿರೋಧಿಸಕೂಡದೆಂಬ ನಿಬಂಧನೆ ಮೇರೆಗೆ ಆಕೆ ಮದುವೆಯಾಗಿದ್ದು, ಬಯಕೆ ತಾಳದ ರಾಜ ಸಂಯಮ ಮೀರಿದ್ದು, ಅರಮನೆ ತೊರೆದು ಉಟ್ಟ ಬಟ್ಟೆ ಕಳಚಿ ಬೆತ್ತಲಾದ ಮಹಾದೇವಿ ಕಲ್ಯಾಣಕ್ಕೆ ಹೊರಟಿದ್ದು, ಅನುಭವಮಂಟಪದಲ್ಲಿ ಅಲ್ಲಮ ಅಕ್ಕನಿಗೆ ಸವಾಲೊಡ್ಡಿದ್ದು, ಸಮರ್ಥನೆಗಳನ್ನು ಕೊಟ್ಟು ಸಂವಾದದಲಿ ಗೆದ್ದು ಕದಳಿವನದತ್ತ ಮಹಾದೇವಿಯಕ್ಕ ಹೊರಟಿದ್ದು, ಶ್ರೀಶೈಲಕೆ ಹೋಗಿ ಚೆನ್ನಮಲ್ಲಿಕಾರ್ಜುನನಲ್ಲಿ ಅಕ್ಕ ಐಕ್ಯವಾಗಿದ್ದನ್ನೆಲ್ಲಾ ದೃಶ್ಯಗಳ ರೂಪದಲ್ಲಿ ಕಟ್ಟಿಕೊಡುವ ಪ್ರಯತ್ನವನ್ನು ಮಾಡುವಲ್ಲಿ ' ಶರಣ ಸತಿ - ಲಿಂಗ ಪತಿ' ನಾಟಕವು ಯಶಸ್ವಿಯಾಗಿದೆ... ಅಕ್ಕ ಮಹಾದೇವಿಯ ಭಕ್ತರಲ್ಲಿ ಪುಳಕವನ್ನುಂಟು ಮಾಡುತ್ತದೆ.
ಆದರೆ ಅಕ್ಕನ ಮೇಲಿನ ಆರಾಧನಾ ಭಾವವನ್ನು ಬದಿಗಿಟ್ಟು ಪ್ರಸ್ತುತ ನಾಟಕವನ್ನು ವಾಸ್ತವದ ನೆಲೆಗಟ್ಟಿನಲ್ಲಿ ನೋಡಿದರೆ ಅಕ್ಕಮಹಾದೇವಿ ಹಠಮಾರಿ ಸ್ವಭಾವದ ಖಳನಾಯಕಿಯಾಗಿ ಗೋಚರಿಸುತ್ತಾಳೆ. ಚರಿತ್ರೆಯಲ್ಲಿ ನಿಜವಾದ ಖಳನಾಯಕನಾದ ಕೌಶಿಕ ರಾಜ ಇಲ್ಲಿ ದುರಂತ ನಾಯಕನಂತೆ ತೋರುತ್ತಾನೆ. ಅಕ್ಕ ಮಹಾದೇವಿಯನ್ನು ವೈಭವೀಕರಿಸಲು ಹೋಗಿ ಅವಳ ಪಾತ್ರಕ್ಕೆ ನಕಾರಾತ್ಮಕತೆಯನ್ನು ಆರೋಪಿಸಿದಂತಿದೆ.
ಆರಂಭದಿಂದಲೂ ಈ ನಾಟಕದ ಮಹಾದೇವಿ ಹಠಮಾರಿತನವನ್ನು ತೋರುತ್ತಾಳೆ. ಹೆತ್ತವರ ಮಾತನ್ನು ಯಾವತ್ತೂ ಕೇಳದೇ ಅಮೂರ್ತ ದೇವರನ್ನು ತನ್ನ ಗಂಡ ಎಂದು ಭ್ರಮಿಸುತ್ತಾಳೆ, ಕಾಣದ ದೇವರ ಜೊತೆ ಮದುವೆಯಾಗುವುದಾಗಿ ಸಂಭ್ರಮಿಸುತ್ತಾಳೆ.
ಮಹಾರಾಜನ ಒತ್ತಡಕ್ಕೋ, ಪ್ರಭುತ್ವದಿಂದಾಗಬಹುದಾದ ಅಪಾಯದ ಆತಂಕಕ್ಕೋ ರಾಜನನ್ನು ಮದುವೆಯಾಗಲು ಒಪ್ಪುವ ಮಹಾದೇವಿ ತನ್ನಿಚ್ಚೆಯಂತೆ ಇರುವ ಶರತ್ತನ್ನೊಡ್ಡುತ್ತಾಳೆ. ವಿವಾಹದ ನಂತರ ರಾಜನು ಆಕೆಗೆ ಆಜ್ಞಾಧಾರಕ ಸೇವಕನಂತೆ ವರ್ತಿಸುತ್ತಾನೆ. ಲಿಂಗ ಪೂಜೆ ಜಂಗಮ ದಾಸೋಹಕ್ಕೆ ರಾಜ್ಯದ ಬೊಕ್ಕಸವನ್ನೇ ಬರಿದು ಮಾಡುತ್ತಾನೆ. ಪ್ರಜೆಗಳಿಂದ ಹಾಗೂ ಸರೀಕರಿಂದ ಅವಮಾನಕ್ಕೊಳಗಾಗುತ್ತಾನೆ. ಪತ್ನಿಯ ಪ್ರೀತಿಯನ್ನು ಪಡೆಯಲು ಇನ್ನಿಲ್ಲದಂತೆ ಪ್ರಾಮಾಣಿಕ ಪ್ರಯತ್ನ ಮಾಡಿ ಸೋಲುತ್ತಾನೆ. ಆದರೆ ಮಹಾದೇವಿದೊಂದೇ ಹಠ ಗಂಡ ಅವಳನ್ನು ಮುಟ್ಟಬಾರದು. ಕೊನೆಗೆ ತಾಳ್ಮೆಗೆಟ್ಟ ರಾಜ ಬಯಕೆಯ ಬೆಂಕಿಯಲಿ ಬೆಂದು ಬಲವಂತದಿಂದ ಹೆಂಡತಿಯನ್ನು ಕೂಡಲು ಬಯಸುತ್ತಾನೆ. ಅದಕ್ಕಾಗಿಯೇ ಕಾಯುತ್ತಲಿದ್ದವರಂತಿದ್ದ ಮಹಾದೇವಿ ರಾಜನನ್ನು ತಿರಸ್ಕರಿಸಿ ಬೆತ್ತಲಾಗಿ ಅರಮನೆ ತೊರೆಯುತ್ತಾಳೆ.
ಅರೆ ಇದರಲ್ಲಿ ರಾಜನದೇನು ತಪ್ಪಿದೆ. ಆತ ಆಕೆಯನ್ನು ಪ್ರೀತಿಸಿದ್ದರಲ್ಲೇನು ಅಪರಾಧವಿದೆ. ತನ್ನ ಪತ್ನಿಯನ್ನು ತಾನು ಸೇರಬಯಸಿದ್ದರಲ್ಲಿ ಅದ್ಯಾವ ದೋಷವಿದೆ. ಲೋಕದ ದೃಷ್ಟಿಯಲ್ಲಿ ರಾಜ ಪ್ರೇಮಮಯಿ, ತ್ಯಾಗಮಯಿಯಂತೆ ಕಾಣುತ್ತಾನೆ. ಆದರೆ ಮಹಾದೇವಿಯ ಅಲೌಕಿಕ ದೃಷ್ಟಿಕೋನದಲ್ಲಿ ಅವನೊಬ್ಬ ಕಾಮುಕ. ದಾಂಪತ್ಯದಲ್ಲಿ ಪ್ರೇಮ ಹಾಗೂ ಕಾಮ ಒಂದೇ ನಾಣ್ಯದ ಎರಡು ಮುಖಗಳು ಎಂಬ ವಾಸ್ತವ ಸತ್ಯವರಿಯದ ಮಹಾದೇವಿ ಪರದ ದ್ಯಾನದಲ್ಲಿ ಮುಳುಗಿ ಇಹವನ್ನು ನಿರಾಕರಿಸುತ್ತಾಳೆ. ಅಲೌಕಿಕ ಆದ್ಯಾತ್ಮದ ಭ್ರಮೆಯಲ್ಲಿರುವವರಿಗೆ ಮಹಾದೇವಿ ಮಾಡಿದ್ದು ಸರಿ ಎಂದೆನಿಸಬಹುದಾದರೂ ವಾಸ್ತವದಲ್ಲಿ ಇಹದ ಪತಿಯ ಅದಮ್ಯ ಪ್ರೇಮವನ್ನು ನಿರಾಕರಿಸಿ, ಅವಾಸ್ತವ ಕಲ್ಪನೆಯ ವ್ಯಕ್ತಿಯನ್ನು ಪತಿಯೆಂದು ಭ್ರಮಿಸಿ ಬದುಕನ್ನು ವಿಚಿತ್ರ ವಿರಹದಲಿ ಸವೆಸಿದ ಮಹಾದೇವಿಯ ನಡೆ ಪ್ರಶ್ನಾರ್ಹವಾಗಿದೆ.
ಇಷ್ಟಕ್ಕೂ ಮಹಾದೇವಿ ಹೋಗಿ ಸೇರಿದ್ದು ಬಸವಣ್ಣನ ಕಲ್ಯಾಣವನ್ನು. ಮಹಾದೇವಿಯಕ್ಕ ಹಾಗೂ ಬಸವಣ್ಣನವರ ವಿಚಾರಗಳು ವೈರುದ್ಯಗಳಿಂದ ಕೂಡಿವೆ. ಅಮೇದ್ಯದ ಮಡಿಕೆ, ಮೂತ್ರದ ಕುಡಿಕೆ ಎಂದು ಅಕ್ಕ ಮನುಷ್ಯ ದೇಹವನ್ನು ತುಚ್ಚೀಕರಿಸಿ ದಿಕ್ಕರಿಸಿದರೆ...ಬಸವಣ್ಣ 'ದೇಹವೆ ದೇಗುಲ, ಶಿರ ಹೊನ್ನ ಕಳಸ' ಎಂದು ಹೇಳಿ ದೇಹವನ್ನು ದೇವಾಲಯಕ್ಕೆ ಹೋಲಿಸಿ ಕಾಯಕ್ಕೆ ದೈವೀಕ ಪಾವಿತ್ರತೆ ತಂದುಕೊಡುತ್ತಾನೆ. ಇಲ್ಲಿ ಅಕ್ಕ ಮಹಾದೇವಿ ಪಕ್ಕಾ ಜೀವವಿರೋಧಿ ಎನ್ನಿಸಿದರೆ, ಬಸವಣ್ಣ ಜೀವಪರವಾದ ಮಹಾನ್ ಚೇತನವಾಗುತ್ತಾರೆ. ಜೀವ ವಿರೋಧಿತನ ಶರಣ ತತ್ವಕ್ಕೆ ಹೊರತಾದ ಪುರೋಹಿತಶಾಹಿ ಸಿದ್ದಾಂತ. ಕಾಯಕದಿಂದ ಬದುಕು ಸಾರ್ಥಕವೆಂದು ಹೇಳುವ ಬಸವಣ್ಣ ಇಡೀ ಜಗತ್ತಿಗೇ ಶ್ರೇಷ್ಟವಾದ ಕಾಯಕ ಸಿದ್ದಾಂತವನ್ನು ಕೊಟ್ಟ ಮಹನೀಯ. ಆದರೆ ಮಹಾದೇವಿಯಕ್ಕ ಇಹದ ಕಾಯಕಕ್ಕಿಂತ ಪರದ ವ್ಯಸನವೇ ಬದುಕಿನ ಮೊದಲ ಹಾಗೂ ಅಂತಿಮ ಗುರಿ ಎಂದು ಸಮರ್ಥಿಸಿಕೊಳ್ಳುತ್ತಾಳೆ. ಪುರೋಹಿತಶಾಹಿವರ್ಗ ಕೂಡಾ ಇದನ್ನೇ ಶತಮಾನಗಳಿಂದ ಪ್ರತಿಪಾದಿಸಿ ದೇವರು ಸ್ವರ್ಗ ನರಕ ಎನ್ನುವ ಅಲೌಕಿಕ ಭ್ರಮೆಯಲ್ಲಿ ಜನರನ್ನು ಹಿಡಿದಿಟ್ಟು ನಂಬಿಸುತ್ತಾ ಬಂದಿರುವುದು. ಕಾಯಕ ಮಾಡದೇ ಹಸಿವಾದೊಡೆ ಭಿಕ್ಷಾನ್ನಗಳುಂಟು ಎಂದು ಇಲ್ಲದ ದೇವರನ್ನು ಹುಡುಕಿಕೊಂಡು ಹೋಗುವುದನ್ನೇ ಕಾಯಕ ಮಾಡಿಕೊಂಡ ಮಹಾದೇವಿಯ ದಾರಿ ಹಾಗೂ ಗುರಿ ಬಸವ ತತ್ವಕ್ಕೆ ವಿರೋಧಿಯಾದಂತಿದ್ದು ಪುರೋಹಿತರ ಅಲೌಕಿಕತೆಗೆ ಪೂರಕವಾದಂತಿದೆ. ಈ ಪುರೋಹಿತ ವರ್ಗ ' ಇಲ್ಲಿರುವುದು ಸುಮ್ಮನೆ ಅಲ್ಲಿರುವುದು ನಮ್ಮನೆ' ಎಂದು ಇಲ್ಲದ ಲೋಕದತ್ತ ಕೈತೋರಿಸುತ್ತಾರೆ. ಅದೇ ರೀತಿ ಅಕ್ಕನೂ ಕೂಡಾ ಇಲ್ಲಿರುವುದೆಲ್ಲಾ ತ್ಯಾಜ್ಯ ಅಲ್ಲಿರುವುದು ಪರಮ ಪೂಜ್ಯವೆನ್ನುವ ಹಾಗೆಯೇ ಬದುಕು ನಿರ್ವಹಿಸುವುದು ವಾಸ್ತವದಲ್ಲಿ ಮಾದರಿಯಲ್ಲ.
ಲೌಕಿಕರ ಕಣ್ಣಿಗೆ ಮನೋರೋಗಿಯ ಹಾಗೆ, ಮತಿಭ್ರಮಣೆಗೊಳಗಾದವರ ಹಾಗೆ ಕಂಡುಬರುವ ಮಹಾದೇವಿ ಅನನ್ಯವೆನಿಸುವ ವಚನಗಳನ್ನು ಕೊಟ್ಟು ವಚನ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದ್ದಂತೂ ನಿಜ. ಅಕ್ಕ ಮಹಾದೇವಿಯ ವ್ಯರ್ಥ ಹೋರಾಟದ ವ್ಯಯಕ್ತಿಕ ಸ್ವಾರ್ಥದ ಬದುಕು ಯಾರಿಗೂ ಆದರ್ಶ ಅಲ್ಲದಿದ್ದರೂ ಅವಳ ವಚನಗಳು ಮಾತ್ರ ಉತ್ಕೃಷ್ಟವಾಗಿವೆ. ಪದ ಕಟ್ಟಿ ವಿಷಯ ನಿರೋಪಿಸುವ ಜಾಣ್ಮೆಗೆ ಅಕ್ಕನಿಗೆ ಅಕ್ಕನೇ ಸಾಟಿ. ಮಹಾದೇವಿಯ ನೀರಸ ಜೀವವಿರೋಧಿ ಬದುಕನ್ನು ಆದರ್ಶ ಎನ್ನುವಂತೆ ತೋರಿಸುವ ಬದಲು ಅಕ್ಕನ ವಚನಗಳನ್ನು ಮಾತ್ರ ಆಧರಿಸಿ ರೂಪಕವನ್ನು ಮಾಡಿದ್ದರೆ ತುಂಬಾ ಸೂಕ್ತವಾಗಬಹುದಾಗಿತ್ತು.
ಪುರುಷ ದೌರ್ಜನ್ಯವನ್ನು ವಿರೋಧಿಸಿದ ಮೊದಲ ಚಾರಿತ್ರಿಕ ಮಹಿಳೆಯೆಂದು ಅಕ್ಕಮಹಾದೇವಿಯನ್ನು ಇತಿಹಾಸದಲ್ಲಿ ಬಿಂಬಿಸಲಾಗಿದೆ. ಆದರೆ ಈ ನಾಟಕದಲ್ಲಿ ಪುರುಷ ದೌರ್ಜನ್ಯದ ಕುರುಹುಗಳೇನೂ ಕಾಣುತ್ತಿಲ್ಲ. ತಂದೆಯಂತೂ ಪಾಪ ಮಹಾದೇವಿ ಇಚ್ಚೆಯಂತೆ ನಡೆಯಲು ಸಂಪೂರ್ಣವಾಗಿ ಸ್ವಾತಂತ್ರ್ಯ ಕೊಟ್ಟವ. ಕೌಶಿಕ ರಾಜನೂ ಸಹ ಆಕೆಯನ್ನು ಪ್ರೀತಿಸಿ ಮದುವೆಯಾಗಿ ಎಲ್ಲರಂತೆ ಬದುಕಲು ಹಾತೊರೆದ ಅದಮ್ಯ ಪ್ರೇಮಿ. ಆತ ಕಾಮಿಯೇ ಆಗಿದ್ದರೆ ಮದುವೆಯಾಗದೇ ಬಲವಂತದಿಂದ ತನ್ನ ಬಯಕೆ ಈಡೇರಿಸಿಕೊಳ್ಳಬಹುದಾಗಿತ್ತು. ಮದುವೆಯ ನಂತರವೂ ಆತ ಆಕೆಯ ಮುಂದೆ ಪ್ರೇಮ ಭಿಕ್ಷೆಗೆ ಕಾಡಿ ಬೇಡುವ ಅಗತ್ಯವಿರಲಿಲ್ಲ. ಪ್ರೇಮ ಕಾಮ ಪತಿಯ ಹಕ್ಕೆಂದು ಪ್ರತಿಪಾದಿಸಿ ಒತ್ತಾಯದಿಂದ ಪಡೆಯಬಹುದಾಗಿತ್ತು... ಆತ ಹಾಗೆ ಮಾಡದೇ ಆಕೆ ಬದಲಾಗಬಹುದೆಂದು ಕಾಯ್ದ. ಪತ್ನಿಯ ಮನಪರಿವರ್ತನೆ ಅಸಾಧ್ಯವೆಂದಾಗ ಬಲವಂತ ಮಾಡಿದ್ದೇ ಅಪರಾಧ ಎಂದಾದಲ್ಲಿ ದಾಂಪತ್ಯವೇ ಅಪರಾಧ ಅಂದಂತಾಗುತ್ತದೆ. ನಿಜವಾಗಿಯೂ ಅಕ್ಕಮಹಾದೇವಿಯನ್ನು ಪುರುಷ ದೌರ್ಜನ್ಯ ವಿರೋಧಿ ಬಂಡಾಯಗಾರ್ತಿ ಎಂದು ತೋರಿಸಲೇ ಬೇಕೆಂದಿದ್ದರೆ ಕೌಶಿಕ ಪಾತ್ರವನ್ನು ಕಾಮುಕ, ಹೆಣ್ಣನ್ನು ಬಳಸಿ ಬಿಸಾಕುವ ರಕ್ಕಸ, ಬಲವಂತವಾಗಿ ಎಳೆತಂದು ಅಕ್ಕನನ್ನು ಸೇಡಿಗಾಗಿ ಮದುವೆಯಾದ ದುಷ್ಟ, ಅಬಲೆಯನ್ನು ಬಲದಿಂದ ಅತ್ಯಾಚಾರ ಮಾಡಿದ ಅನಾಚಾರಿ... ಅಂತೆಲ್ಲಾ ತೋರಿಸಬೇಕಿತ್ತು. ಆತನ ಹಿಂಸೆಗೆ ಬಲಿಯಾಗಿ... ಸಂಸಾರದ ಬಗ್ಗೆ ಜಿಗುಪ್ಸೆಗೊಂಡು... ಅರಮನೆ ತೊರೆದು.. ಭವದ ಅಪಾಯಕಾರಿ ಗಂಡಸರಿಗಿಂತ ಪರದ ನಿಷ್ಪಾಪಿ ಗಂಡೇ ಪತಿಯೆಂದು ಅಕ್ಕಮಹಾದೇವಿ ಚೆನ್ನಮಲ್ಲಿಕಾರ್ಜುನನನ್ನು ಹುಡುಕಿ ಹೊರಟಿದ್ದರೆ ಅವಳ ನಡೆಗೆ ತಾರ್ಕಿಕತೆ ಬೆಂಬಲವಾಗುತ್ತಿತ್ತು. ಪುರುಷ ವಿರೋಧಿ ಬಂಡಾಯಕ್ಕೆ ಸಾರ್ಥಕತೆ ಬರುತ್ತಿತ್ತು. ಆದರೆ... ಅಕಾರಣ ಅಲೌಕಿಕ ಭ್ರಮೆಯನ್ನು ಹುಟ್ಟಿಸಿಕೊಂಡು ಪ್ರಾಮಾಣಿಕ ಪ್ರೀತಿಯನ್ನು ನಿರಾಕರಿಸಿ, ವಿನಾಕಾರಣ ದೇಹವನ್ನು ತುಚ್ಚೀಕರಿಸಿ ರೂಹಿಲ್ಲದ ದೇವರನ್ಜು ಹುಡುಕಿ ಹೋಗಿ ಕೊನೆಗೆ ಆತ್ಮಹತ್ಯೆ ಮಾಡಿಕೊಂಡ ಮಹಾದೇವಿಯಕ್ಕನ ದುರಂತ ಬದುಕಿಗೆ ಸಮರ್ಥನೆಗಳು ಸಾಲವು. ದೇಹ ಸಂಗಾತವನು ತಿರಸ್ಕರಿಸಿ ಆತ್ಮಸಂಗಾತದ ಆತ್ಮರತಿಗಿಳಿದವರ ಜೀವವಿರೋದಿತನವನ್ನು ವಾಸ್ತವದ ಅರಿವಿನ ಮಾನದಂಡಗಳು ಸಮರ್ಥಿಸಲಾರವು. ಅವಾಸ್ತವದ ಅಲೌಕಿಕ ಮಾನದಂಡಗಳನ್ನು ಬಳಸಿ ಅಕ್ಕನ ನಡೆಯನ್ನು ಸಮರ್ಥಿಸಿಕೊಂಡರೆ ಅದು ಬಸವಣ್ಣನ ಶರಣ ತತ್ವಕ್ಕೆ ವಿರೋಧಿಯಾಗುತ್ತದೆ, ವೈದಿಕಶಾಹಿಯ ಇಹ ಪರ ಸಿದ್ದಾಂತಕ್ಕೆ ಪೂರಕವಾಗುತ್ತದೆ. ಬಸವನಿಷ್ಟ ಲಿಂಗಾಯತ ಮಠವು ಈ ನಾಟಕದ ಪ್ರಾಯೋಜಕರು ಹಾಗೂ ಆಯೋಜಕರೂ ಆಗಿದ್ದರಿಂದ ಈ ನಿಟ್ಟಿನಲ್ಲಿ ಆಲೋಚಿಸಿ ನಾಟಕದಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಿಕೊಳ್ಳುವುದುತ್ತಮ.
- ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ