ಶನಿವಾರ, ಅಕ್ಟೋಬರ್ 15, 2016

ತಹ ತಹ..... 27 ನ್ಯಾಯಾಲಯಕೆ ಕರುಳಿಲ್ಲ. ; ಕೇಂದ್ರಕ್ಕೆ ಇಚ್ಚಾಶಕ್ತಿ ಇಲ್ಲ; ಕನ್ನಡಿಗರ ಬವಣೆಗೆ ಕೊನೆಯೆಂಬುದಿಲ್ಲ.

ತಹ ತಹ..... 27

" ದೇವ ಮಂದಿರದಲ್ಲಿ ದೇವರು ಕಾಣಲೆ ಇಲ್ಲಾ. . ನ್ಯಾಯ ಮಂದಿರದಲ್ಲಿ ನ್ಯಾಯವು ಸಿಗಲೇ ಇಲ್ಲಾ. . ." ಎಂದು ಕನ್ನಡಿಗರು ಕೋರಸ್ಸಿನಲ್ಲಿ ಹಾಡುವಂತಾ ದುಸ್ಥಿತಿಯನ್ನು ಸುಪ್ರಿಂ ಕೋರ್ಟ್ ಸರಣಿ ಆದೇಶ ನಿರ್ಮಿಸಿದೆ. ಕಾನೂನು ಕೋರ್ಟು ಯಾವುದೇ ಆಗಲಿ ನೊಂದ ಜನರ ಕೊರಳ ದ್ವನಿಗೆ ಕರುಳಾಗದೇ ಮೆದುಳಾಗಿದ್ದೇ ಹೆಚ್ಚು.  'ಕೋರ್ಟುಗಳಿಗೆ ಬೇಕಾದದ್ದು ಜನರ ಬದುಕಿನ ವಾಸ್ತವದ ಚಿತ್ರಣಗಳಲ್ಲ, ಕೇವಲ ಕಾಗದದ ಮೇಲಿನ ಅಂಕಿ ಅಂಶಗಳು ಹಾಗೂ ಅದನ್ನು ಏರುದ್ವನಿಯಲ್ಲಿ ಸಮರ್ಥಿಸಿಕೊಳ್ಳುವ ವಿತಂಡವಾದಗಳು' ಎಂಬುದು ಕಾವೇರಿ ವಿಷಯದಲ್ಲಿ ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ

ಕರ್ನಾಟಕದ ಜನತೆ ಇನ್ನೂ ಎಷ್ಟೂಂತಾ ಅನ್ಯಾಯವನ್ನು ಸಹಿಸುವುದು. ತಮಿಳುನಾಡಿನ ಜಲಾಶಯದಲ್ಲಿ ಐವತ್ತು ಟಿಎಂಸಿ ನೀರಿದ್ದರೂ ಅದು ಅಲ್ಲಿಯ ಬೆಳೆಗಳಿಗೆ ಸಾಲೋದಿಲ್ಲಾ ಕರ್ನಾಟಕದ ಜಲಾಶಯದ ನೀರು ಬೇಕು ಅನ್ನೋದು ತಮಿಳುನಾಡಿನ ವಾದ. ಅರೆ... ನಮ್ಮ ಜಲಾಶಯದಲ್ಲಿರೋದೇ ಇಪ್ಪತ್ತಾರು ಟಿಎಂಸಿ ನೀರು ಅದು ನಮ್ಮ ಜನರಿಗೆ ಕುಡಿಯೋದಕ್ಕೆ ಅಗತ್ಯವಾಗಿ ಬೇಕು ಎಂಬುದು ಕರ್ನಾಟಕದ ಪ್ರತಿವಾದ. ಸಾಮಾನ್ಯ  ವ್ಯವಹಾರಜ್ಞಾನ ಇರುವ ಯಾವುದೇ ವ್ಯಕ್ತಿಗೂ ಕುಡಿಯುವ ನೀರೇ ಜನರ ಬದುಕಿಗೆ ಮೊದಲ ಅಗತ್ಯ ಎನ್ನುವ ಸತ್ಯ ಅರ್ಥವಾಗುತ್ತದೆ. ಆದರೆ ಅದು ಮೇಧಾವಿಗಳಾದ ನ್ಯಾಯಾಧೀಶರಿಗೆ ಅರ್ಥವಾಗುತ್ತಿಲ್ಲ. ಇದಕ್ಕಿಂತ ಭಾವಶೂನ್ಯತೆ ಬೇರೇನಿದೆ.

ರಾಜ್ಯದಲ್ಲಿನ ಮಳೆಯ ಅಭಾವದ ಬಾಧೆಯ ನಡುವೆಯೂ ಸುಪ್ರೀಂ ಕೋರ್ಟ ತಮಿಳುನಾಡಿನ ಆಗ್ರಹದ ಮೇರೆಗೆ  ಹತ್ತು ದಿನಗಳ ಕಾಲ ದಿನಕ್ಕೆ 15 ಸಾವಿರ ಕ್ಯೂಸೆಕ್ಸ್ ನೀರನ್ನು ಕೆಆರೆಸ್ಸ್ ನಿಂದ ಬಿಡಲು ಸೆ.5 ರಂದು ಆದೇಶಿಸಿತು. ಕರ್ನಾಟಕ ಸರಕಾರ ಮರುಪರಿಶೀಲನೆಗೆ ಮನವಿ ಮಾಡಿಕೊಂಡಿತು. ತೀರ್ಪಿನ ವಿರುದ್ದ ಕನ್ನಡಿಗರು ಸೆ.9 ರಂದು  ಕರ್ನಾಟಕ ಬಂದ್ ಮಾಡಿ ತಮ್ಮ ವಿರೋಧವನ್ನು ತೋರಿಸಿದರು. ಏನೋ ಯವಟ್ಟಾಗಿದೆ ಮರುಪರಿಶೀಲನೆಯಲ್ಲಿ ನ್ಯಾಯ ಸಿಗಬಹುದೆಂಬ ಆಸೆಯಿತ್ತು. ಆದರೆ ಸೆ.12 ರಂದು ಬಂದ ಆದೇಶದಲ್ಲಿ ಸೆ.20ರವರೆಗೆ ಹತ್ತು ದಿನಗಳ ಕಾಲ ಪ್ರತಿ ದಿನ 12 ಸಾವಿರ ಕ್ಯೂಸೆಕ್ಸ್ ನೀರು ಬಿಡಬೇಕೆಂದಾದಾಗ ಕನ್ನಡಿಗರ ಸಹನೆ ಮೀರಿ ಕರ್ನಾಟಕದ ರಾಜಧಾನಿಯ ಬೀದಿ ಬೀದಿಗಳಲ್ಲಿ ಬೆಂಕಿಬಿತ್ತು. ಸರಕಾರ ಕೋರ್ಟಿನ ಆದೇಶವನ್ನು ಚಾಚೂತಪ್ಪದೆ ಪಾಲಿಸಿ ನೀರು ಬಿಡತೊಡಗಿತು. ಅದು ಹೇಗೋ ಇಪ್ಪತ್ತು ದಿನ ನೀರು ಬಿಟ್ಟಾಯಿತು. ಇನ್ಮೇಲೆ ನೀರು ಬಿಡಲು ಸಾಧ್ಯವೇ ಇಲ್ಲವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿಯೂ ಆಯಿತು

ಆದರೆ ಸೆ.19 ರಂದು ಕಾವೇರಿ ಮೇಲುಸ್ತುವಾರಿ ಸಮಿತಿಯು ಮತ್ತೆ ಹತ್ತು ದಿನ  ಮೂರು ಸಾವಿರ ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಬಿಡಬೇಕೆಂದು ಆದೇಶಿಸಿತು. ಸಮಿತಿಯ ನಿರ್ಣಯಕ್ಕೆ ಪ್ರತಿಪಕ್ಷಗಳು ಹಾಗೂ ಕನ್ನಡಪರ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದವು.  "ತಮಿಳುನಾಡಿಗೆ ಇವತ್ತಿನಿಂದ ನಿತ್ಯ ಮೂರು ಸಾವಿರಕ್ಕೆ ಬದಲು ಆರು ಸಾವಿರ ಕ್ಯೂಸೆಕ್ಸ್ ನೀರನ್ನು ಹರಿಸಬೇಕು" ಎನ್ನುವ ಆದೇಶವನ್ನು ಸೆ.21 ರಂದು ಸುಪ್ರಿಂ ಕೋರ್ಟ್  ಕೊಟ್ಟಿತು. ತಮಗಾದ ಅನ್ಯಾಯಕ್ಕೆ ಬದಲಾಗಿ ಕನ್ನಡಿಗರು ಪ್ರತಿಭಟಿಸಿದಷ್ಟೂ ಸುಪ್ರಿಂ ಕೋರ್ಟ್ ಜಿದ್ದಿಗೆ ಬಿದ್ದು ಸೇಡು ತೀರಿಸಿಕೊಳ್ಳುತ್ತಿದೆಯಾ? ಹಾಗೊಂದು ಸಂದೇಹಕ್ಕೆ ಪೂರಕವಾಗಿದೆ ಉನ್ನತ ಕೋರ್ಟಿನ ಆದೇಶ.  

ನ್ಯಾಯಾಲಯ ಹೀಗೆ ಇರುವ ನೀರನ್ನೆಲ್ಲಾ ಬಿಡಲು ಆದೇಶಿಸುತ್ತಿದ್ದರೆ ನೀರೆಲ್ಲಾ ಖಾಲಿಯಾದ ನಂತರ ಕರ್ನಾಟಕ ಸರಕಾರ ಬೋರವೆಲ್ ಕೊರೆಸಿ ಅಂತರ್ಜಲದಿಂದ ಕಾವೇರಿ ನದಿಗೆ ನೀರು ತುಂಬಿ ತಮಿಳುನಾಡಿಗೆ ನೀರು ಬಿಡಬೇಕು ಎಂದು ಆದೇಶಿಸುತ್ತದೆ ಎಂಬ ಜೋಕ್ ಜಾಲತಾಣದಲ್ಲಿ ಹರಿದಾಡುತ್ತಿದೆ.

ಯಾರು ಏನೇ ಹೇಳಲಿ. ಸತತವಾಗಿ ಕರ್ನಾಟಕಕ್ಕೆ ಅನ್ಯಾಯ ಆಗುತ್ತಿರುವುದಂತೂ ಸತ್ಯ. ಕೋರ್ಟು ಅಂದರೆ ನ್ಯಾಯದಾನ ಮಾಡುವ ಪರಮ ಪವಿತ್ರ ಸಂಸ್ಥೆ ಎಂದು ಕರ್ನಾಟಕದ ಜನತೆ ನಂಬಿತ್ತು. ಆದರೆ ಕೋರ್ಟು ಹಾಗೂ ಸಮಿತಿಗಳು ಒಂದು ಕಣ್ಣಿಗೆ ಬೆಣ್ಣೆ ಹಾಗೂ ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚುವುದನ್ನು ಮುಂದುವರೆಸಿವೆ. ನ್ಯಾಯಾಲಯದ ಮೇಲಿನ ವಿಶ್ವಾಸವೇ ಹೊರಟು ಹೋಗಿದೆ.

ಯಾವಾಗ ನ್ಯಾಯಾಂಗದಿಂದಲೂ ಅನ್ಯಾಯವಾಯಿತೋ ಆಗ ಶಾಸಕಾಂಗದ ಮೇಲೆ ಒತ್ತಡ ತರುವುದೊಂದೇ ಈಗ ಕನ್ನಡಿಗರಿಗಿರುವ ಮಾರ್ಗ. ಕನ್ನಡಪರ ಸಂಘಗಳು, ರೈತಪರ ಸಂಘಟನೆಗಳು ಮೊದಲು ಮಾಡಬೇಕಾದ ಕೆಲಸವೆಂದರೆ ಪಕ್ಷಾತೀತವಾಗಿ ಕರ್ನಾಟಕ ರಾಜ್ಯದ ಎಲ್ಲಾ ಎಂಪಿ, ಎಂ ಎಲ್ , ಮಂತ್ರಿ ಮಾನ್ಯರ ಸಾಮೂಹಿಕ ರಾಜೀನಾಮೆಗೆ ಒತ್ತಾಯಿಸುವುದು. ಕನ್ನಡಿಗರ ಹಿತರಕ್ಷಣೆಗೆ ತ್ಯಾಗಕ್ಕೆ ಸಿದ್ದರಾಗಲೇಬೇಕೆಂದು ಜನಪ್ರತಿನಿಧಿಗಳನ್ನು ಒಪ್ಪಿಸುವುದು, ಅದಕ್ಕೂ ಅವರು ಮಣಿಯದಿದ್ದರೆ ಸಾಮ ಬೇಧ ದಂಡಾದಿ ಪ್ರಯೋಗಗಳನ್ನು ಮಾಡಿ ರಾಜೀನಾಮೆ ಕೊಡುವಂತಹ ಪರಿಸ್ಥಿತಿಯನ್ನು ನಿರ್ಮಿಸುವುದು. ಇದರಿಂದಾ ಕೇಂದ್ರ ಸರಕಾರದ ಮೇಲೆ ಒತ್ತಡ ಹೆಚ್ಚಾಗುತ್ತದೆ. ಹೀಗೆ ಪ್ರಧಾನಿಗಳು ಮೌನವಹಿಸಿದರೆ  ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಅದರಲ್ಲೂ ಬಿಜೆಪಿಗೆ ಭವಿಷ್ಯವಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾದರೆ ಸಾಕು ಕೇಂದ್ರ ಸರಕಾರ ಎಚ್ಚೆತ್ತುಕೊಂಡು ಜಲವಿವಾದದ ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತದೆ

ವ್ಯಾಜ್ಯ ಕೋರ್ಟಲ್ಲಿದೆ ಪ್ರಧಾನಿ ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲ ಎನ್ನುವ ವ್ಯರ್ಥ ಸಮರ್ಥನೆಗಳನ್ನು ಬಿಜೆಪಿ ಕೊಡುತ್ತಿದೆ. ತಮಗೆ ಬೇಕಾದಾಗ ಬೇಕಾದಂತೆ ನ್ಯಾಯಂಗದ ಮೇಲೆ ಕೇಂದ್ರ ಸರಕಾರ ಒತ್ತಡ ಹೇರಿದ ಅನೇಕ ಉದಾಹರಣೆಗಳಿವೆ. ಶಾಸಕಾಂಗ ಇಚ್ಚಾಶಕ್ತಿ ಪ್ರದರ್ಶಿಸಿದರೆ ಸಂಸತ್ತಿನಲ್ಲಿ ಶಾಸನಗಳನ್ನು ರೂಪಿಸಿ ನ್ಯಾಯಾಂಗವನ್ನೂ ಮಣಿಸಬಹುದಾಗಿದೆ. ಪ್ರಜಾಪ್ರಭುತ್ವದಲ್ಲಿ ಸುಪ್ರಿಂ ಕೋರ್ಟಿಗಿಂತ ಸುಪ್ರಿಮ್ ಆಗಿರೋದು ಸಂಸತ್ತು. ಭಾರತವೆಂಬ ಒಕ್ಕೂಟ ವ್ಯವಸ್ಥೆಯನ್ನು ವ್ಯವಸ್ಥಿತವಾಗಿರಿಸಲು ಸಂಸತ್ತು ಅಗತ್ಯ ತೀರ್ಮಾಣವನ್ನು ಕಾಲಕಾಲಕ್ಕೆ ತೆಗೆದುಕೊಳ್ಳಬೇಕು. ಜನರಿಂದ ಆಯ್ಕೆಯಾಗಿದ್ದು ಸಂಸತ್ತೇ ಹೊರತು ನ್ಯಾಯಾಧೀಶರಲ್ಲ. ಜನರ ಸಮಸ್ಯೆಯನ್ನು ಅರಿತು ಆದ್ಯತೆಯ ಮೇಲೆ ಪರಿಹರಿಸುವುದು ಪ್ರಧಾನಿಯಾದವರ ಬಾಧ್ಯತೆಯೂ ಆಗಿದೆ. ಕೋರ್ಟಿನ ನೆಪ ಹೇಳಿ ಪ್ರಧಾನಿಯಾಗಲೀ ಇಲ್ಲವೆ ಅವರ ಸಮರ್ಥಕರಾಗಲೀ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವಂತಿಲ್ಲ. ಹಾಗೇನಾದರೂ ಪಲಾಯನವಾದಿಗಳಾದರೆ ಜನರೆ ಪಾಠ ಕಲಿಸುತ್ತಾರೆಂಬುದಂತೂ ಸುಳ್ಳಲ್ಲಎಷ್ಟು ವರ್ಷಗಳ ಕಾಲ ಹೀಗೆ ಕಾವೇರಿ ಸಮಸ್ಯೆಯೆಂಬ ರಣಗಾಯ ಜೀವಂತವಾಗಿರೋದು. ಮಳೆ ಕೊರತೆಯಾದ ವರ್ಷವೆಲ್ಲಾ ಗಾಯ ಉಲ್ಬಣಗೊಂಡು ಹಿಂಸೆ ನೋವು ಅತಿಯಾಗುವುದು. ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಲೇಬೇಕಲ್ಲ. ರಾಷ್ಟ್ರೀಯ ಜಲ ನೀತಿ ಅನ್ನೋದು ಭವ್ಯ ಭಾರತಕ್ಕೆ ಅರ್ಜೆಂಟಾಗಿ ಬೇಕಿದೆಯಲ್ಲಾ. ಅದನ್ನು ರೂಪಿಸಲು ಕರ್ನಾಟಕದ ಆಳುವ ವರ್ಗಗಳು ಹಾಗೂ ಸಂಘಟನೆಗಳು ಕೇಂದ್ರ ಸರಕಾರದ ಮೇಲೆ ಎಲ್ಲಾ ರೀತಿಯ ಒತ್ತಡವನ್ನು ಹೇರಬೇಕಿದೆ. ಆಗಾಗ ಉಲ್ಬಣಗೊಂಡು ಭಾಷಾಂಧತೆಯ ವೈಮನಸ್ಸಿಗೆ ಕಾರಣವಾಗುತ್ತಿರುವ ನದಿ ನೀರಿನ ಹಂಚಿಕೆಯ ಸಮಸ್ಯೆಗೆ ಅಂತಿಮ ಪರಿಹಾರ ಕಂಡುಕೊಳ್ಳಲೇ ಬೇಕಿದೆ. ಅದು ರಾಜಕೀಯ ಇಚ್ಚಾಶಕ್ತಿಯ ಮೇಲೆ ಹಾಗೂ ಜನಾಂದೋಲನದ ತೀವ್ರತೆಯ ಮೇಲೆ ನಿರ್ಧಾರವಾಗುವಂತಹುದಾಗಿದೆ. ಅಲ್ಲಿವರೆಗೂ ಕನ್ನಡಿಗರು ಮೇಲೆ ಹೇಳಿದ ಸಿನೆಮಾ ಹಾಡಿನ ಸಾಲನ್ನು ಗುಣಗುಣಿಸುತ್ತಿರಬೇಕಿದೆ.

- ಶಶಿಕಾಂತ ಯಡಹಳ್ಳಿ



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ