"ಆಹಾರ ನಮ್ಮ ಆಯ್ಕೆ" ಎನ್ನುವ ಮನುಷ್ಯರ ಮೂಲಭೂತ ಬೇಡಿಕೆಗೆ ಒತ್ತಾಯಿಸಿ 'ಉಡುಪಿ ಚಲೋ ' ಎನ್ನುವ ಪ್ರತಿಭಟನೆಯನ್ನು ಆಯೋಜಿಸಲಾಗಿತ್ತು. ಅಕ್ಟೋಬರ್ 4 ರಂದು ಬೆಂಗಳೂರಿನ ಪ್ರೀಡಂ ಪಾರ್ಕನಲ್ಲಿ ದಲಿತ ದಮನಿತರ ಸ್ವಾಭಿಮಾನಿ ಜಾಥಾದ ಉದ್ಘಾಟನೆ ಸಮಾರಂಭ ನಡೆಯಿತು. ಆ ಸಂದರ್ಭದಲ್ಲಿ ಮಂಜುನಾಥ ರಚಿಸಿ, ಶಶಿಧರ್ ಭಾರೀಘಾಟರವರು ನಿರ್ದೇಶಿಸಿದ "ಪ್ರಿಜ್ಜಿನಲ್ಲೇನಿದೆ" ಎನ್ನುವ ಬೀದಿ ನಾಟಕವನ್ನು ಸಮುದಾಯ ಬೆಂಗಳೂರು ತಂಡದ ಕಲಾವಿದರು ಪ್ರದರ್ಶಿಸಿದರು.
ದಲಿತರ ಸ್ವಾಭಿಮಾನಿ ಸಂಘರ್ಷದ ಜಾಥಾದ ಆಶಯಕ್ಕೂ ಹಾಗೂ ಈ ಬೀದಿನಾಟಕದ ಉದ್ದೇಶಕ್ಕೂ ಸಾಮ್ಯತೆ ಹಾಗೂ ವೈರುದ್ಯಗಳಿದ್ದವು. ಗುಜರಾತಿನ ಊನಾದಲ್ಲಿ ದಲಿತರ ಮೇಲೆ ಹಿಂದುತ್ವವಾದಿಗಳು ಮಾಡಿದ ಹಲ್ಲೆಯನ್ನು ಪ್ರತಿಭಟಿಸಿದ ದಲಿತರು ಆಹಾರ ನಮ್ಮ ಆಯ್ಕೆ ಎಂದು ಘೋಷಿಸಿ ಬ್ರಹತ್ ಪ್ರತಿಭಟನೆ ಮಾಡಿದರು. ಅದರ ಪ್ರೇರಣೆಯಿಂದಾಗಿ ಹಲವಾರು ಸಂಘಟನೆಗಳು ನೀಲಿ ಬಾವುಟದಡಿಯಲ್ಲಿ ಒಂದಾಗಿ ಕರ್ನಾಟಕದಲ್ಲಿ ಉಡುಪಿ ಚಲೋ ಪ್ರತಿಭಟನೆ ಹಮ್ಮಿಕೊಂಡಿವೆ. ದಾದ್ರಿ ಗ್ರಾಮದಲ್ಲಿ ಮತಾಂಧರು ಮನೆಯಲ್ಲಿ ಗೋಮಾಂಸ ಇಟ್ಟುಕೊಂಡನೆಂದು ಸುಳ್ಳು ವದಂತಿ ಹಬ್ಬಿಸಿ ಮುಸ್ಲಿಂ ವ್ಯಕ್ತಿಯನ್ನು ಸಾರ್ವಜನಿಕವಾಗಿ ಹೊಡೆದು ಕೊಂದರು. ಈ ಅಮಾನುಷ ಘಟನೆಯನ್ನು ಆಧರಿಸಿ 'ಪ್ರಿಜ್ನಲ್ಲೇನಿದೆ' ಬೀದಿ ನಾಟಕ ರಚನೆಯಾಗಿದೆ.
ಈ ನಾಟಕದಲ್ಲಿ ಹತ್ಯೆಗೊಳಗಾದ ಮುಸ್ಲಿಂ ವ್ಯಕ್ತಿಯ ಮಗಳು "ಪ್ರಿಜ್ನಲ್ಲಿರೋದು ಗೋಮಾಂಸವಾಗಿರದೇ ಮಟನ್ ಆಗಿದೆಯೆಂದಾದರೆ ಸತ್ತ ನನ್ನ ತಂದೆ ವಾಪಸ್ ಬರ್ತಾರೆಯೆ " ಎಂದು ಪದೇ ಪದೇ ಕೇಳುತ್ತಾಳೆ. ಅರೆ... ದಲಿತ ದಮನಿತ ಜನತೆ ಕೇಳುತ್ತಿರುವುದು ಸಂಪೂರ್ಣ ಆಹಾರದ ಆಯ್ಕೆಯ ಹಕ್ಕನ್ನು. ಉಡುಪಿ ಚಲೋದ ಮುಖ್ಯ ಆಶಯವೂ ಕೂಡಾ 'ಆಹಾರ ನಮ್ಮ ಆಯ್ಕೆ" ಎನ್ನುವುದೇ ಆಗಿದೆ. ಆದರೆ ಈ ಬೀದಿ ನಾಟಕ ಗೋಮಾಂಸವನ್ನು ಹೊರಗಿಟ್ಟೇ ಆಹಾರದ ಆಯ್ಕೆ ಬಗ್ಗೆ ಮಾತಾಡುತ್ತಿದೆ. ಇದು ಪಕ್ಕಾ ಬ್ರಾಹ್ಮಣಿಕಲ್ ಅಪ್ರೋಚ್ ಎನ್ನುವ ಅನುಮಾನ ಈ ನಾಟಕವನ್ನು ಸೂಕ್ಷ್ಮವಾಗಿ ಅವಲೋಕಿಸಿದವರ ಗಮನಕ್ಕೆ ಬಾರದೇ ಇರದು.
ಯಾಕೆಂದರೆ... ಗೋಮಾಂಸ ಆದರೆ ಮಾತ್ರ ಸಮಸ್ಯೆ ಬೇರೆ ಮಾಂಸವಾದರೆ ಪರವಾಗಿಲ್ಲ ಅನ್ನುವ ಧೋರಣೆ ಎಲ್ಲಾ ನಮೂನಿಯ ಹಿಂದುತ್ವವಾದಿಗಳದ್ದಾಗಿದೆ. ಈ ನಾಟಕವೂ ಪರೋಕ್ಷವಾಗಿ ಅದನ್ನೇ ಹೇಳುವಂತಿದೆ. ಬೀಪ್ ಬದಲು ಮಟನ್ ಆಗಿದ್ದರೆ... ಎಂದೇ ಪದೇ ಪದೇ ಹೇಳಿಸಲಾಗಿದೆ. ಅದರರ್ಥ ಬೀಪ್ ತಿನ್ನುವುದು ಅಪರಾಧ ಎನ್ನುವುದೇ ಆದಂತಿದೆ. ನಾವೀಗ ಪ್ರತಿಪಾದಿಸಬೇಕಾಗಿರೋದು ಯಾವ ಬಗೆಯ ಮಾಂಸ ತಿನ್ನಬೇಕು ಹಾಗೂ ಯಾವುದನ್ನು ತಿನ್ನಬಾರದು ಎಂದಲ್ಲ . "ಮಾಂಸ ಯಾವುದೇ ಪ್ರಾಣಿಯದೇ ಆಗಿರಲಿ ಅದನ್ನು ತಿನ್ನುವುದು ಬಿಡುವುದು ಪ್ರತಿಯೊಬ್ಬ ವ್ಯಕ್ತಿಯ ವ್ಯಯಕ್ತಿಕ ಹಕ್ಕು. ಆಹಾರದ ಆಯ್ಕೆ ವ್ಯಕ್ತಿಯ ವಿವೇಚನೆಗೆ ಬಿಟ್ಟಿದ್ದು" ಎನ್ನುವುದನ್ನು ಪ್ರತಿಪಾದಿಸುವ ಅಗತ್ಯವಿದೆ. ಇದರಲ್ಲಿ ಗೋಮಾಂಸವನ್ನು ಪ್ರತ್ಯೇಕವಾಗಿರಿಸುವ ಅಗತ್ಯವಿಲ್ಲ. ಶತಮಾನಗಳಿಂದ ಗೋಮಾಂಸವು ಬ್ರಾಹ್ಮಣರೂ ಸೇರಿದಂತೆ ಎಲ್ಲಾ ವರ್ಗದ ಮಾಂಸಾಹಾರಿಗಳ ಆಹಾರವೇ ಆಗಿದೆ. ಯಾರೋ ಕೆಲವರು ತಮ್ಮ ಭಾವನೆಗೆ ದಕ್ಕೆಯಾಗುತ್ತದೆ ಎಂದು ಬಾಯಿಬಡಿದುಕೊಂಡರೆ ಗೊಮಾಂಸವನ್ನು ತಮ್ಮ ಆಹಾರ ಕ್ರಮದ ಭಾಗವಾಗಿ ಮಾಡಿಕೊಂಡು ಬಂದ ದಲಿತ ಮತ್ತು ಮುಸ್ಲಿಂ ಸಮುದಾಯ ಯಾಕೆ ತ್ಯಜಿಸಬೇಕು? ಎಂಬುದನ್ನು ಈ ನಾಟಕ ಪ್ರಶ್ನಿಸಬೇಕಿತ್ತು. "ಪ್ರಿಜ್ನಲ್ಲಿರುವ ಮಾಂಸ ಯಾವುದಾದರೇನು ಅದು ನಮ್ಮ ಆಹಾರ, ಅದನ್ನು ಯಾರೂ ಪ್ರಶ್ನಿಸುವಂತಿಲ್ಲ' ಎಂಬುದನ್ನು ಈ ನಾಟಕ ಪ್ರತಿಪಾದಿಸಿದ್ದರೆ ಮನುಷ್ಯರ ಆಹಾರದ ಹಕ್ಕನ್ನು ಎತ್ತಿಹಿಡಿದಂತಾಗುತ್ತಿತ್ತು. ಈ ಸಮಾವೇಶದ ಆಶಯಕ್ಕೂ ಪೂರಕವಾಗಿರುತ್ತಿತ್ತು.
ದಾದ್ರಿ ಘಟನೆಯಾದಾಗ ಪ್ರಮುಖವಾಗಿ ಮಾಧ್ಯಮಗಳಲ್ಲಿ ಚರ್ಚೆಯಾಗಿದ್ದು ಮುಸ್ಲಿಂ ವ್ಯಕ್ತಿಯ ಮನೆಯ ಪ್ರಿಜ್ನಲ್ಲಿದ್ದದ್ದು ಗೋಮಾಂಸವಾ ಇಲ್ಲಾ ಮಟನ್ನಾ ಎಂಬುದರ ಕುರಿತಾಗಿತ್ತು. ಆದರೆ ಈ ಚರ್ಚೆ ಹಿಂದುತ್ವವಾದಿ ಅಜೆಂಡಾದ ಭಾಗವೇ ಆದಂತಿತ್ತು. "ಅದು ಗೋಮಾಂಸವೇ ಆಗಿದ್ದರಿಂದಾಗಿ ಭಾವತೀವ್ರತೆಗೊಳಗಾದ ಗೋಪ್ರೀಯರು ಗೋಮಾಂಸಭಕ್ಷಕನನ್ನು ಕೊಂದರು" ಎಂದು ನಕಲಿ ಗೋರಕ್ಷಕರ ಪರವಾಗಿದ್ದ ಮನುವಾದಿ ಮನಸುಗಳು ವಾದಿಸಿದವು. ಅದು ಯಾವ ಮಾಂಸ ಎಂದು ಕನ್ಪರಂ ಮಾಡಿಕೊಳ್ಳಲು ಲ್ಯಾಬರೋಟರಿಗಳಿಗೆ ಕಳುಹಿಸಲಾಯ್ತು. ಹಿಂದುತ್ವವಾದಿ ರಾಜಕೀಯದ ಭಾಗವಾಗಿ ಅದು ಗೋಮಾಂಸವೆಂದು ಸಾಬೀತು ಪಡಿಸಲು ಸಂಘ ಪರಿವಾರ ಪ್ರಯತ್ನಿಸುತ್ತಲೇ ಇತ್ತು.. ಇದೆ.
ಇಲ್ಲಿ ಪ್ರಶ್ನೆ ಇರುವುದು ಅದು ಯಾವ ಮಾಂಸವಾದರೆ ಏನೀಗ? ಮನುಷ್ಯನನ್ನು ಹೊಡೆದು ಕೊಲ್ಲುವುದು ಘೋರ ಅಪರಾಧ. ಸತ್ತ ಹಸುವಿನ ಮಾಂಸದ ತುಂಡು ಸಿಕ್ಕಿತೆಂದು ಬದುಕಿದ್ದ ವ್ಯಕ್ತಿಯನ್ನು ಹಿಂಸಿಸಿ ನಡುಬೀದಿಯಲ್ಲಿ ಕೊಂದಿದ್ದಂತೂ ಸಮರ್ಥನೀಯ ಅಲ್ಲವೇ ಅಲ್ಲ. "ನಾನೇನಾದರೂ ತಿನ್ನುತ್ತೇನೆ ಕೇಳಲು ನೀನ್ಯಾರು.. ಆಹಾರ ನನ್ನ ಆಯ್ಕೆ ಅದನ್ನು ಪ್ರಶ್ನಿಸಲು ನಿನಗೆ ಅಧಿಕಾರ ಕೊಟ್ಟವರು ಯಾರು?" ಎಂದು ಗಟ್ಟಿಯಾಗಿ ನಿಂತು ಮನುವಾದಿ ಪಿಂಡಗಳಿಗೆ ಕೇಳಬೇಕಾಗಿದೆ. ಇದನ್ನು ಊನಾದ ದಲಿತ ಸಮಾವೇಶ ಹಾಗೂ ಉಡುಪಿ ಚಲೋ ಸ್ವಾಭಿಮಾನಿ ಜಾಥಾಗಳು ಸಮರ್ಥವಾಗಿ ಮಾಡಿವೆ... ಮಾಡುತ್ತಿವೆ.
ಆಹಾರದ ಆಯ್ಕೆಯ ವಿಷಯದಲ್ಲಿ ಸ್ವಾಭಿಮಾನಿ ದಲಿತರು ತೆಗೆದುಕೊಂಡಂತೆ ಈ ಬೀದಿನಾಟಕದಲ್ಲಿ ಕೂಡಾ ಸ್ಪಷ್ಟ ನಿಲುವನ್ನು ತೆಗೆದುಕೊಳ್ಳಬೇಕಿತ್ತು. "ನಮ್ಮನೇ ಪ್ರಿಜ್ನಲ್ಲಿರೋದು ಯಾವ ಮಾಂಸವಾದರೇನು ಅದು ನಮ್ಮ ಆಹಾರ. ನಿಮ್ಮ ಮತಾಂಧತೆಗೆ ಬಲಿಯಾದ ನಮ್ಮ ತಂದೆ ವಾಪಸ್ ಬರ್ತಾರೇನು?" ಎಂದು ಹತ್ಯೆಯಾದವನ ಮಗಳ ಪಾತ್ರದಾರಿಯ ಬಾಯಲ್ಲಿ ಹೇಳಿಸಿದ್ದರೆ ಈ ನಾಟಕಕ್ಕೊಂದು ಸ್ಪಷ್ಟತೆ ಬರುತ್ತಿತ್ತು. ಆಡಿಸಿದ ಸಂದರ್ಭಕ್ಕೆ ನಾಟಕ ಸೂಕ್ತವಾಗುತ್ತಿತ್ತು.
ಪ್ರಿಜ್ನಲ್ಲೇನಿದೆ ಬೀದಿ ನಾಟಕವು ತನ್ನ ಆಶಯದ ಮೂಲ ವಿಷಯಕ್ಕಿಂತಾ ಬೇರೆ ವಿಷಯಗಳ ಚರ್ಚೆಗೆ ಹೆಚ್ಚು ಸಮಯ ತೆಗೆದುಕೊಂಡಿದೆ. ಕಲಬುರ್ಗಿಯಯಂತಹ ವಿಚಾರವಾದಿಗಳ ಹತ್ಯೆ ಇಂದಾ ಹಿಡಿದು ಹಲವಾರು ಪ್ರಸ್ತುತ ಸಮಸ್ಯೆಗಳ ಕುರಿತು ಚರ್ಚಿಸುತ್ತದೆ. ಇದರಿಂದಾಗಿ ಗೋಮಾಂಸ ಹಾಗೂ ಹಿಂದುತ್ವವಾದಿಗಳ ವಿಚಾರವು ಡೈಲ್ಯೂಟ್ ಆದಂತಾಗಿ ಹಲವಾರು ವಿಷಯಗಳ ಭಾರಕ್ಕೆ ಇಡೀ ಬೀದಿ ನಾಟಕ ಕುಸಿದಂತಾಗಿದೆ. ಪ್ರಸ್ತುತಗೊಂಡ ಈ ಪ್ರಯೋಗದ ಕುರಿತೇ ಹೇಳುವುದಾದರೆ ಬೀದಿ ನಾಟಕದ ತಂತ್ರಗಾರಿಕೆಯನ್ನು ಬಳಸಿಕೊಳ್ಳುವಲ್ಲಿ ನಿರ್ದೇಶಕರು ಸೋತಿದ್ದಾರೆ. ಯಾಕೆಂದರೆ ಬೀದಿ ನಾಟಕ ಎನ್ನುವುದೇ ರೌಂಡ ಥೇಯಟರ್. ಸುತ್ತಲೂ ಜನರಿದ್ದರೆ ನಡುವೆ ಕಲಾವಿದರಿರುತ್ತಾರೆ. ಎಲ್ಲಾ ಪ್ರೇಕ್ಷಕರಿಗೆ ನಾಟಕದ ಆಶಯವನ್ನು ಅಭಿನಯದ ಮೂಲಕ ತಲುಪಿಸುವುದು ನಟರ ಕರ್ತವ್ಯ. ಆದರೆ ಈ ನಾಟಕದ ಕಲಾವಿದರು ಪ್ರಿಸೀನಿಯಂ ಥಿಯಟರಿನ ಹಾಗೆ ಒಂದೇ ದಿಕ್ಕಿನತ್ತ ಮುಖಮಾಡಿ ಅಭಿನಯಿಸಿದ್ದರಿಂದ ಇನ್ನೂ ಮೂರು ದಿಕ್ಕಿನಲ್ಲಿದ್ದ ಪ್ರೇಕ್ಷಕರು ಕಲಾವಿದರ ಬೆನ್ನು ನೋಡಬೇಕಾಯಿತು. ಇದೇ ಸಮುದಾಯ ತಂಡಕ್ಕೆ ಬೀದಿ ನಾಟಕದ ತಂತ್ರಗಳನ್ನು ತಮ್ಮ ಬೆಲ್ಚಿ ಬೀದಿ ನಾಟಕದ ಮೂಲಕ ಸಿಜಿಕೆ ಕಲಿಸಿಕೊಟ್ಟಿದ್ದರು. ಆದರೆ ಅದೇ ತಂಡ ಹೀಗೆ ಬೀದಿರಂಗದ ಪ್ರಮುಖ ತಂತ್ರವನ್ನೇ ಮುರಿದಿದ್ದು ಆಭಾಸಕಾರಿಯಾಗಿದೆ. ಈ ರಂಗತಂತ್ರಗಳನ್ನು ಮುಂದಿನ ಪ್ರದರ್ಶನಗಳಲ್ಲಿ ಬದಲಾಯಿಸಬಹುದಾಗಿದೆ. ಆದರೆ ಮೊದಲು ನಾಟಕದಲ್ಲಿರುವ ಆಹಾರದ ಆಯ್ಕೆಯ ವಿಷಯದಲ್ಲಿರುವ ಗೊಂದಲ ಬಗೆಹರಿಸಿ ಸ್ಪಷ್ಟತೆಯನ್ಜು ತರಬೇಕಾಗಿದೆ. ಆಹಾರ ವ್ಯಕ್ತಿಯ ಹಕ್ಕು ಎನ್ನುವುದನ್ನು ಗಟ್ಟಿಯಾಗಿ ಹಾಗೂ ಸ್ಪಷ್ಟವಾಗಿ ಹೇಳುವ ಮೂಲಕ ಈ ಬೀದಿ ನಾಟಕವನ್ನು ಹುಸಿ ಹಿಂದುತ್ವವಾದಿಗಳ ವಿರುದ್ದ ಜನಜಾಗ್ರತಿ ಮೂಡಿಸುವ ಅಸ್ತ್ರವಾಗಿ ಮಾರ್ಪಡಿಸಬಹುದಾದ ಸಾಧ್ಯತೆಗಳಿವೆ. ಸೂಕ್ತ ತಾರ್ಕಿಕ ಬದಲಾವಣೆ ಹಾಗೂ ಬೀದಿ ರಂಗ ತಂತ್ರಗಳ ಪರಿಣಾಮಕಾರಿ ಬದಲಾವಣೆಗಳೊಂದಿಗೆ ಈ ಬೀದಿ ನಾಟಕ ನಾಡಿನ ಜನರನ್ನು ತಲುಪಿ ನಕಲಿ ಗೋರಕ್ಷಕರ ಹುನ್ನಾರಗಳನ್ಜು ಬಯಲು ಮಾಡಲಿ ಎಂದು ಆಶಿಸಬಹುದಾಗಿದೆ. ಬೀದಿ ಬೀದಿಗಳಲಿ ನಿಂತು "ಆಹಾರ ನಮ್ಮ ಆಯ್ಕೆ" ಎಂದು ಸಾರಿ ಹೇಳಬೇಕಿದೆ.
- ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ