ತಹ ತಹ.....30
ಹದಿನಾರನೇ ಶತಮಾನದ ಸಂತಕವಿ ಕನಕದಾಸರ ಬದುಕು ಹಾಗೂ ಬರಹಗಳನ್ನು ಇಪ್ಪತ್ತೊಂದನೆಯ ಶತಮಾನದಲ್ಲಿ ನಿಂತು ಅವಲೋಕಿಸುವುದು ಅಷ್ಟೊಂದು ಸುಲಭಸಾಧ್ಯವಲ್ಲ. ಆಗಿನ ಕಾಲಘಟ್ಟದ ತವಕ ತಲ್ಲಣಗಳು ಹಾಗೂ ವರ್ತಮಾನದ ತಳಮಳಗಳಲ್ಲಿ ಸಾಮ್ಯತೆ ಮತ್ತು ಭಿನ್ನತೆಗಳಿವೆ. ಕಾಲ ಯಾವುದಾದರೇನು ಮನುಷ್ಯರ ನಡುವಿನ ರಾಗದ್ವೇಷ ತಾರತಮ್ಯ ಅಸಮಾನತೆಗಳಂತೂ ನಿರಂತರವಾಗಿವೆ. ಆದ್ದರಿಂದ ಸಾರ್ವಕಾಲಿಕ ಸಮಸ್ಯೆಗಳನ್ನು ಭಕ್ತಿಯ ನೆಲೆಯಲ್ಲಿ ನಿಂತು ಕೀರ್ತನೆಗಳ ಮೂಲಕ ವಿಶ್ಲೇಷಿಸಿದ ಕನಕರ ಚಿಂತನೆಗಳು ವರ್ತಮಾನಕ್ಕೂ ಅನ್ವಯವಾಗುವಂತಿವೆ. ಆದ್ದರಿಂದ ಕನಕ ಸಾಹಿತ್ಯದ ಮರು ಓದು ಇಂದಿನ ಅಗತ್ಯವಾಗಿದೆ. ಅಂತಹ ಒಂದು ಸ್ತುತ್ಯಾರ್ಹ ಕೆಲಸವನ್ನು ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವು ಮಾಡುತ್ತಿದೆ.
ಕನಕದಾಸರ ಮರು ಓದು ಯಾಕೆ? ಮತ್ತು ಹೇಗೆ? ಎನ್ನುವ ಪ್ರಶ್ನೆಗಳನ್ನಿಟ್ಟುಕೊಂಡು ಉತ್ತರಗಳ ಹುಡುಕಾಟ ಮಾಡಲಾಗುತ್ತಿದೆ. ಮತ್ತು ಅಂತಹ ಹುಡುಕಾಟ ಪ್ರಸ್ತುತ ಅಗತ್ಯವೂ ಆಗಿದೆ.
ಬಲಪಂಥೀಯ ಚಿಂತಕರು ಕನಕರನ್ನು ಕೇವಲ ಒಬ್ಬ ಭಕ್ತ ಇಲ್ಲವೇ ದಾಸ ಎನ್ನುವ ರೀತಿಯಲ್ಲಿ ಪರಿಭಾವಿಸಿ ಶತಮಾನಗಳಿಂದ ನಿರ್ಲಕ್ಷಿಸುತ್ತಲೇ ಬಂದಿದ್ದಾರೆ. ತಮ್ಮ ದೇವರ ಮಹಿಮೆಯನ್ನು ವೈಭವೀಕರಿಸಲು ಹಾಗೂ ಜನಮಾನಸದಲ್ಲಿ ಕೃಷ್ಞ ಇಲ್ಲವೇ ವಿಷ್ಣುವಿನ ಮಹಿಮೆಯನ್ನು ಬಿತ್ತಲು ಎಷ್ಟು ಬೇಕೋ ಅಷ್ಟು ಮಾತ್ರ ಶೂದ್ರ ಕೀರ್ತನಕಾರ ಕನಕನನ್ನು ಬಳಸಿಕೊಂಡು ಅಲಕ್ಷಿಸಿದ್ದಾರೆ.
ಅದೇ ರೀತಿ ಎಡಪಂಥೀಯ ವಿಚಾರವಂತರೂ ಸಹ ಕನಕರನ್ನು ಬಲಪಂಥೀಯ ವಿಚಾರಗಳ ಪ್ರತಿಪಾದಕನೆಂದು ಆರೋಪಿಸಿ ತಮ್ಮ ವೈಚಾರಿಕತೆಯ ವ್ಯಾಪ್ತಿಯಿಂದ ಹೊರಗಿಟ್ಟಿದ್ದಾರೆ. ಕನಕರ ಕೀರ್ತನೆಗಳಲ್ಲಿ ವೈದಿಕಶಾಹಿಯ ಕಲ್ಪನೆಗಳಾದ ದೈವಭಕ್ತಿ, ಮೋಕ್ಷ, ಪರಲೋಕ ಚಿಂತನೆ, ಅಲೌಕಿಕ ಭಾವನೆಗಳು ಕಂಡುಬರುವುದರಿಂದ ಪ್ರಗತಿಪರ ಚಿಂತಕರು ಕನಕರಿಂದ ಒಂದು ಅಂತರ ಕಾಪಾಡಿಕೊಂಡಿದ್ದಾರೆ.
ಈ ಎಡ ಮತ್ತು ಬಲಪಂಥಗಳಿಗೆ ಬೇಕಾದ ಹಾಗೂ ಬೇಡವೆನಿಸುವ ಅಂಶಗಳು ಕನಕರ ಕೀರ್ತನೆಗಳಲ್ಲಿ ಹಾಸುಹೊಕ್ಕಾಗಿವೆ. ಬಲಪಂಥೀಯ ವೈದಿಕಶಾಹಿ ಸಿದ್ದಾಂತಿಗಳಿಗೆ ತಮ್ಮ ದೇವರು, ಧರ್ಮ, ಭಕ್ತಿ, ಮೋಕ್ಷಗಳ ಮೇಲೆ ಮೋಹ. ಭೌತಿಕವಾದಿಗಳಾದ ಎಡಪಂಥೀಯರಿಗೆ ವೈಚಾರಿಕ ನೆಲಗಟ್ಟೇ ಪ್ರಧಾನ. ಹೀಗಾಗಿ ಕನಕರ ಕೀರ್ತನೆಗಳು ಎಡ ಬಲ ಸಿದ್ದಾಂತಗಳೆರಡರ ಮಿಶ್ರಣವಾಗಿದ್ದರಿಂದ ಎರಡೂ ಪಂಥಗಳೂ ಕನಕರನ್ನು ತಮಗೆ ಅಗತ್ಯವಿದ್ದಷ್ಟು ಮಾತ್ರ ಉಲ್ಲೇಖಿಸಿ ದೂರವಿಡುತ್ತಾ ಬಂದಿವೆ. ಎಡ ಬಲಗಳ ಹಂಗಿಲ್ಲದೇ ಉಳಿದ ಅಸಂಖ್ಯಾತ ಸಾಮಾನ್ಯ ಜನತೆ ಕನಕರ ಕೀರ್ತನೆಗಳ ಮೂಲಕ ಭಕ್ತಿ ಭಾವ ವಿಚಾರಗಳೆಲ್ಲವನ್ನೂ ಹಾಡುಗಳ ರೂಪದಲ್ಲಿ ನಿರ್ಭಾವುಕರಾಗಿ ಕೇಳಿ ಆನಂದಿಸಿ ಸುಮ್ಮನಾಗುತ್ತಾರೆ.
ಆದರೆ ಕನಕದಾಸರು 'ಎಡ ಬಲ ಹಾಗೂ ನಡು'ವಿನ ಜನರ ತತ್ವ ಸಿದ್ದಾಂತ ನಂಬಿಕೆಗಳನ್ನೂ ಮೀರಿ ನಿಲ್ಲುವ ಸಾಮರ್ಥ್ಯವನ್ನು ಪಡೆದ ಅನುಭಾವಿ ಕವಿ. ಬಲಪಂಥೀಯರ ಭಕ್ತಿಯ ನೆಲೆಯಲ್ಲಿ ನಿಂತು, ಎಡಪಂಥೀಯರ ಸಮಾಜ ಸುಧಾರಣೆಯ ತುಡಿತಕ್ಕೆ ಪೂರಕವಾಗಿ ಕನಕದಾಸರ ಚಿಂತನೆಗಳು ಮೂಡಿಬಂದಿದ್ದನ್ನು ಮರೆಯಲಾಗದು.
ಕನಕರ ಬದುಕು ಹಾಗೂ ಬರಹಗಳನ್ನು ವರ್ತಮಾನದಲ್ಲಿ ನಿಂತು ವಿಶ್ಲೇಷಿಸುವಾಗ ಕನಕರ ಕಾಲಘಟ್ಟದ ಆತಂಕ ಹಾಗೂ ಅನಿವಾರ್ಯತೆಗಳನ್ನೂ ಪರಿಗಣನೆಗೆ ತೆಗೆದುಕೊಳ್ಳಲೇಬೇಕಿದೆ. ಇಲ್ಲವಾದರೆ ಕನಕರು ಮರುಓದಿಗೆ ಸಿಕ್ಕುವುದಿಲ್ಲ. ಎಡ ಬಲಗಳ ಪೂರ್ವಾಗ್ರಹಗಳ ಮಾನದಂಡಗಳನು ತೊರೆಯದೇ ಕನಕರ ಚಿಂತನೆ ಯಾರಿಗೂ ದಕ್ಕುವುದಿಲ್ಲ.
ಹೀಗಾಗಿ ಕನಕದಾಸರ ಮರು ಓದಿಗೆ ಮುನ್ನ ಪುರ್ವನಿಯೋಜಿತ ಸಿದ್ದಾಂತಗಳ ಹಂಗನ್ನು ಹರಿದುಕೊಂಡು, ಸಿದ್ದ ಮಾನದಂಡಗಳನ್ನು ಬದಿಗಿಟ್ಟು ಕನಕರ ಬದುಕು ಬರಹ ವಿಚಾರಗಳ ಚಿಂತನ ಮಂಥನ ಮಾಡಬೇಕಿದೆ.
ಸಿದ್ದ ಮಾದರಿ ಪಠ್ಯಗಳು ಕನಕರನ್ನು ಪವಾಡಪುರುಷ ಎನ್ನುವಂತೆ ಚಿತ್ರಿಸಿವೆ. ಅದಕ್ಕೆ ಪೂರಕವಾಗಿ ಉಡುಪಿ ಕೃಷ್ಣನ ಹಿಮ್ಮುಖ ಚಲನೆಯನ್ನು ವೈಭವೀಕರಿಸಿವೆ. ಹಾಗೆಯೇ ತಮ್ಮ ದೇವರು(ಕೃಷ್ಣ) ಹಾಗೂ ಧರ್ಮ (ವೈದಿಕ)ಗಳ ಕುರಿತ ನಂಬಿಕೆಗಳನ್ನು ಜನರಲ್ಲಿ ಗಟ್ಟಿಗೊಳಿಸಲು ಬೇಕಾದ ಹಾಗೆ ಕನಕರನ್ನು ಪುರೋಹಿತಶಾಹಿಗಳು ಬಳಸಿಕೊಂಡಿದ್ದಾರೆ. ಕನಕರನ್ನು ಈ ಪವಾಡಗಳು ಹಾಗೂ ವೈದಿಕಶಾಹಿಗಳ ಸಿಕ್ಕಿನಿಂದ ಬಿಡುಗಡೆಗೊಳಸಿ ವಾಸ್ತವವನ್ನು ಇಂದಿನ ಹಾಗೂ ಮುಂದಿನ ತಲೆಮಾರಿಗೆ ಮನದಟ್ಟುಮಾಡುವದಕ್ಕಾಗಿ ಕನಕ ಮರು ಓದು ಇಂದಿನ ಅಗತ್ಯವಾಗಿದೆ. ಇಲ್ಲವಾದರೆ ಸುಳ್ಳುಗಳೇ ಜನಮಾನಸದಲ್ಲಿ ಅಧೀಕೃತಗೊಂಡು ಸತ್ಯವೆನ್ನುವುದು ಮುಚ್ಚಿ ಹೋಗುವ ಅಪಾಯವಿದೆ.
ಕನಕರ ಕೀರ್ತನೆಗಳಲ್ಲಿ ಹಾಸುಹೊಕ್ಕಾಗಿರುವ ಭಕ್ತಿಯ ತೀವ್ರತೆ, ದೈವಾರಾಧನಾ ಭಾವುಕತೆ ಹಾಗೂ ಸಂಪೂರ್ಣ ಶರಣಾಗತಿಯನ್ನು ಹೊರತುಪಡಿಸಿ ಕನಕನ ಬರಹಗಳಲ್ಲಿ ಇರುವ ಸಾಮಾಜಿಕ ಮೌಲ್ಯಗಳು, ನೈತಿಕ ಪ್ರಜ್ಞೆ, ಜಾತ್ಯಾತೀತತೆ, ಅಸಮಾನತೆಯ ವಿರುದ್ದದ ಪ್ರತಿಭಟನೆಗಳನ್ನು ಈಗಿನ ತಲೆಮಾರಿನವರಿಗೆ ತಿಳಿಸಲಾದರೂ ಕನಕರ ಮರು ಓದು ಅತ್ಯಗತ್ಯವಾಗಿದೆ. ಕನಕದಾಸರ ಕಾವ್ಯಗಳ ಕುರಿತು ಯುವಜನರ ಅರಿವನ್ನು ವಿಸ್ತರಿಸಿ ಚಿಂತನೆಗೆ ಪ್ರೇರೇಪಿಸಲು ಕನಕ ಸಾಹಿತ್ಯದ ಮರು ಓದು ಬೇಕಾಗಿದೆ.
ಕನಕಸದಾಸರನ್ನು ಮತ್ತೆ ಏಕೆ ಓದಬೇಕು ಎನ್ನುವುದು ಸ್ಪಷ್ಟವಾದ ನಂತರ, ಮರು ಓದಿನ ಉದ್ದೇಶ ಅರಿತ ನಂತರ ಹೇಗೆ ಓದಬೇಕು ಎನ್ನುವುದರ ಕುರಿತು ಚಿಂತಿಸಬೇಕಿದೆ. ಈಗಾಗಲೇ ಕನಕರನ್ನು ಓದಲು ಸಿದ್ದವಾದ ಮಾದರಿ ಪಠ್ಯವೊಂದನ್ನು ತಯಾರಿಸಲಾಗಿದ್ದು ಅದೇ ಜನರ ಮನದಲ್ಲಿ ಅಚ್ಚಾಗಿದೆ. ಕನಕದಾಸರ ಕುರಿತು ಸಿನೆಮಾ ಬಂದ ನಂತರ ಕನಕ ಪವಾಡ ಪುರುಷ ಎನ್ನುವ ಭಾವನೆ ಜನಮನದಲ್ಲಿ ಖಾಯಂ ಆಗಿದೆ. ಮೊದಲು ಈ ಪೂರ್ವಗ್ರಹಗಳನ್ನು ತೊಡೆದು ಹಾಕಲು ವೈಚಾರಿಕ ಚಿಂತನೆಯುಳ್ಳವರು ಪ್ರಯತ್ನಿಸಬೇಕಿದೆ. ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವು ಹಲವಾರು ಕನಕ ಓದು ಶಿಬಿರಗಳನ್ನು ವಿದ್ಯಾರ್ಥಿ ಯುವಕರಿಗಾಗಿ ಏರ್ಪಡಿಸುತ್ತಾ ಬರುತ್ತಿದೆ. ಹೆಚ್ಚಾಗಿ ಸಂವಾದ ಪ್ರಧಾನವಾದ ಕಾರ್ಯಾಗಾರಗಳನ್ನು ಮಾಡುತ್ತಾ, ವಿಚಾರ ಸಂಕಿರಣಗಳನ್ನು ಏರ್ಪಡಿಸುತ್ತಾ ಕನಕ ಸಾಹಿತ್ಯವನ್ನು ಹೇಗೆ ಗ್ರಹಿಸಿ ಓದಬೇಕು ಎನ್ನುವ ಹುಡುಕಾಟದಲ್ಲಿದೆ. ಕನಕ ಓದಿಗೆ ಅಗತ್ಯವಾದ ಪರಿಕರಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ. ಕನಕದಾಸರ ಸಾಹಿತ್ಯ ಮತ್ತು ವಿಚಾರಗಳ ಕುರಿತು ಹಲವಾರು ಪುಸ್ತಕಗಳನ್ನೂ ಹಾಗೂ ಕಿರ್ತನೆಗಳ ಸಿಡಿ ಗಳನ್ನೂ ಹೊರತಂದಿದೆ.
ಏಕೆ ಕನಕರನ್ನು ಓದಬೇಕು ಎನ್ನುವುದು ಸ್ಪಷ್ಟವಾದರೂ ಹೇಗೇ ಓದಬೇಕು ಅನ್ನುವುದರ ಕುರಿತು ಸ್ಪಷ್ಟ ನಿಲುವುಗಳಿಲ್ಲ. ಕನಕರ ಸಂಕೀರ್ಣವಾದ ವ್ಯಕ್ತಿತ್ವ ಹಾಗೂ ಬರಹಗಳನ್ನು ಸರಳವಾಗಿ ಅರ್ಥೈಸಿಕೊಳ್ಳುವುದು ಸಾಧ್ಯವೂ ಇಲ್ಲ. ಆದ್ದರಿಂದ ಕನಕರನ್ನು ಮರು ಓದಿಗೆ ಅಳವಡಿಸುವುದು ಅಂದರೆ ಅದಕ್ಕೆ ಬೇರೆಯದೇ ಆದ ರೀತಿಯ ಸಿದ್ದತೆ ಹಾಗೂ ವಿಶ್ಲೇಷನಾತ್ಮಕ ಬದ್ದತೆಗಳು ಬೇಕಾಗುತ್ತವೆ.
ಮೊದಲು ಕನಕದಾಸರಿಗೆ ಉದ್ದೇಶಪೂರ್ವಕವಾಗಿ ಆರೋಪಿಸಲಾದ ಪವಾಡಗಳ ಬಂಧನದಿಂದ ಅವರನ್ನು ಬಿಡುಗಡೆಗೊಳಿಸಬೇಕಿದೆ. ಪವಾಡಗಳೆಲ್ಲಾ ಅವೈಜ್ಞಾನಿಕವಾದ ಕಟ್ಟು ಕಥೆಗಳು, ಅವುಗಳ ಹಿಂದೆ ಏನೆಲ್ಲಾ ಹಿತಾಸಕ್ತಿಗಳು ಕೆಲಸ ಮಾಡುತ್ತವೆ ಎಂಬುದನ್ನು ಈಗಿನ ತಲೆಮಾರಿನವರಿಗೆ ಸಾಧ್ಯವಾದ ಎಲ್ಲಾ ಮಾಧ್ಯಮಗಳ ಮೂಲಕ ತಿಳಿಸಬೇಕಿದೆ. ಭಕ್ತಿಯೊಂದೆ ಕನಕರ ಕೀರ್ತನೆಗಳ ಉದ್ದೇಶವಲ್ಲ, ಭಕ್ತಿ ಮಾರ್ಗದ ಮೂಲಕ ಸಾಮಾಜಿಕ ಸುಧಾರಣೆ ಕನಕರ ಆಶಯವಾಗಿತ್ತು ಎನ್ನುವುದನ್ನು ಮೊದಲು ಇಂದಿನ ಯುವಜನಾಂಗಕ್ಕೆ ಮನದಟ್ಟು ಮಾಡಿಕೊಡಬೇಕಿದೆ. ಯಾವಾಗ ಕನಕನನ್ನು ರೂಢಿಗತ ಭ್ರಮೆಗಳಿಂದ ಮುಕ್ತಗೊಳಿಸಲಾಗುತ್ತದೋ ಆಗ ಕನಕರ ಚಿಂತನೆಗಳು ಸಿಕ್ಕುತ್ತವೆ. ಕನಕನ ಬದುಕು ಬರಹಗಳನ್ನು ಓದುವ ಕಣ್ಣುಗಳಿಗೆ ಹಾಕಲಾದ ಪುರೋಹಿತಶಾಹಿ ಪ್ರಣೀತ ಕನ್ನಡಕಗಳನ್ನು ಕಿತ್ತೊಗೆದು ವೈಚಾರಿಕ ಹಿನ್ನೆಲೆಯಲ್ಲಿ ವಿಶ್ಲೇಷನಾತ್ಮಕ ದೃಷ್ಟಿಕೋನವನ್ನು ಬೆಳಸಿದಾಗ ಮಾತ್ರ ನಿಜವಾದ ಕನಕ ದಕ್ಕುತ್ತಾನೆ.
ಈ ನಿಟ್ಟಿನಲ್ಲಿ ಕನಕ ಅಧ್ಯಯನ ಕೇಂದ್ರ ಹಾಗೂ ಪ್ರಗತಿಪರ ಚಿಂತಕರು ಆಲೋಚನೆ ಮಾಡುವುದುತ್ತಮ. ಕನಕನನ್ನು ಭಕ್ತಿಯ ನೆಲೆಯಲ್ಲಿ ಅರ್ಥೈಸದೇ ವೈಚಾರಿಕ ನೆಲೆಯಲ್ಲಿ ನೋಡಿದಾಗ ಮಾತ್ರ ಕನಕನ ಮರು ಓದು ಸಾರ್ಥಕವಾಗುತ್ತದೆ.
- ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ